ನವದೆಹಲಿ, ಫೆ.1- ಯಾವುದೇ ಹೊಸ ತೆರಿಗೆ ವಿಧಿಸದೆ, ಹಳೆ ತೆರಿಗೆ ಪದ್ಧತಿಯನ್ನೇ ಮುಂದುವರೆಸಿ ಹೊಸ ಯೋಜನೆಗಳನ್ನೂ ಪ್ರಕಟಿಸದೆ ಬಡವರು, ಮಹಿಳೆಯರು, ಯುವಕರು ಹಾಗೂ ಅನ್ನದಾತರಿಗೆ ವಿಶೇಷ ಒತ್ತು ನೀಡಲಾಗಿದ್ದು, ಜನಸಾಮಾನ್ಯರು, ಮಧ್ಯಮ ವರ್ಗದವರ ಮೂಗಿಗೆ ತುಪ್ಪ ಸವರುವ ಮೂಲಕ ಕೇಂದ್ರ ಸರ್ಕಾರದ ಬಹುನಿರೀಕ್ಷಿತ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗಿದೆ.
ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲಿದೆ ಎಂಬ ಜನತೆಯ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಆಶಾದಾಯಕ ಎಂದು ಹೇಳಿಕೊಂಡಿದ್ದರೂ, ಹೊಸ ಯೋಜನೆಗಳನ್ನು ಘೋಷಣೆ ಮಾಡದಿರುವುದು ಈ ಬಜೆಟ್‍ನ ವಿಶೇಷತೆಯಾಗಿದೆ. 7 ಲಕ್ಷದವರೆಗೆ ತೆರಿಗೆ ಮಿತಿಯನ್ನು ನೀಡಿರುವುದಷ್ಟೇ ಸಮಾಧಾನಕರ ಬೆಳವಣಿಗೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 70 ಪ್ರತಿಶತ ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ.ಆದಾಯ ತೆರಿಗೆ ಸ್ಲ್ಯಾಬ್‍ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಪ್ರಮಾಣದಲ್ಲಿ ಶೇ.3ರಷ್ಟು ಹೆಚ್ಚಳವಾಗಿದೆ. 2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆ ಮೇಲೆ ಹಿಡಿತ ಸಾಧಿಸಲಾಗಿದೆ. 2023-24ನೇ ಹಣಕಾಸು ವರ್ಷಕ್ಕೆ ಪರಿಷ್ಕøತ ವಿತ್ತೀಯ ಕೊರತೆ ಶೇ.5.8ರಷ್ಟು ನಿಗದಿಪಡಿಸಲಾಗಿದೆ.
ಮಾಲ್ಡೀವ್ಸ್ ಗೆ ತಿರುಗೇಟು : ಬಜೆಟ್‍ನಲ್ಲಿ ಲಕ್ಷದ್ವೀಪ ಅಭಿವೃದ್ಧಿ ಘೋಷಣೆ
ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಿದೆ. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಪ್ರತ್ಯೇಕ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ವಿಸ್ತರಿಸಲಾಗುವುದು. ಜೈಜವಾನ್, ಜೈಕಿಸಾನ್, ಜೈವಿಜ್ಞಾನ, ಜೈ ಅನುಸಂಧಾನ ಎಂಬ ಪ್ರಧಾನಿ ಮೋದಿ ಅವರ ಘೋಷಣೆಯಡಿ ಕಾರ್ಯನಿರ್ವಹಿಸುತ್ತೇವೆ. ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ದೇಶದ 3 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇತ್ತೀಚೆಗೆ ಘೋಷಣೆಯಾದ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು ನೀಡಲಾಗಿದೆ. ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಅಳವಡಿಸುವ ಈ ಯೋಜನೆ ಬಗ್ಗೆ ಅವರು ತಮ್ಮ ಬಜೆಟ್ ಭಾಷಣದಲ್ಲಿ ವಿಶೇಷವಾದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಒಂದು ಕೋಟಿ ಮನೆಗಳಲ್ಲಿ ಸೌರ ಮೇಲ್ಛಾವಣಿ ಅಳವಡಿಸಲು ಉದ್ದೇಶಿಸಲಾಗಿದೆ.