Saturday, February 1, 2025
Homeರಾಷ್ಟ್ರೀಯ | Nationalಮಧುಬನಿ ಸೀರೆಯಲ್ಲಿ ನಿರ್ಮಲಾ ಮಿಂಚಿಂಗ್‌

ಮಧುಬನಿ ಸೀರೆಯಲ್ಲಿ ನಿರ್ಮಲಾ ಮಿಂಚಿಂಗ್‌

Budget 2025: Nirmala Sitharaman wears Madhubani Saree

ನವದೆಹಲಿ, ಫೆ. 1: ಸತತ ಎಂಟನೇ ಬಾರಿಗೆ ಬಜೆಟ್‌ ಮಂಡನೆ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೆನೆ ಬಣ್ಣದ ಮಧುಬನಿ ಸೀರೆ, ಕೆಂಪು ಬಣ್ಣದ ರವಿಕೆ, ಶಾಲು ಹಾಕಿಕೊಂಡು ಗಮನ ಸೆಳೆದರು.

ಪದ ಪ್ರಶಸ್ತಿ ವಿಜೇತೆ ಬಿಹಾರದ ದುಲಾರಿ ದೇವಿ ಗೌರವಾರ್ಥ ನಿರ್ಮಲಾ ಸೀತಾರಾಮನ್‌ ಈ ಸೀರೆ ಧರಿಸಿದ್ದಾರೆ. ಇದನ್ನು ಅವರಿಗೆ ದುಲಾರಿ ದೇವಿ ಉಡುಗೊರೆ ನೀಡಿದ್ದರು ಎನ್ನಲಾಗಿದೆ. ಪ್ರತಿ ವರ್ಷ ಬಜೆಟ್‌ ದಿನದಂದು ನಿರ್ಮಲಾ ಸೀತಾರಾಮನ್‌ ವಿಭಿನ್ನ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ಗಮನ ಸೆಳೆದಿದ್ದಾರೆ. ಬಜೆಟ್‌ ದಿನದಂದು ಅವರು ಉಟ್ಟ ಸೀರೆಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಇದೀಗ ನಿರೀಕ್ಷೆಯಂತೆಯೇ ಈ ಬಾರಿಯೂ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ದುಲಾರಿ ದೇವಿ ಅವರು 2021 ರಲ್ಲಿ ಪದಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮಿಥಿಲಾ ಕಲಾ ಸಂಸ್ಥಾನದಲ್ಲಿ ಕ್ರೆಡಿಟ್‌ ಔಟ್ರೀಚ್‌ ಕಾರ್ಯಕ್ರಮವೊಂದಕ್ಕಾಗಿ ಹಣಕಾಸು ಸಚಿವರು ಮಧುಬನಿಗೆ ಭೇಟಿ ನೀಡಿದ್ದಾಗ, ಅವರು ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು.

ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ದುಲಾರಿ ದೇವಿ ಅವರು ಹಣಕಾಸು ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು ಮತ್ತು ಬಜೆಟ್‌ ದಿನದಂದು ಅದನ್ನು ಧರಿಸುವಂತೆ ಮನವಿ ಮಾಡಿದ್ದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2024 ರ ಫೆಬ್ರವರಿಯಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್‌ ಮಂಡಿಸಿದ್ದರು. ಆಗ ನೀಲಿ ಸೀರೆ ಉಟ್ಟು ಸಂಸತ್ತನ್ನು ಪ್ರವೇಶಿಸಿದ್ದರು. ಆ ಸೀರೆಯ ಮೇಲೆ ದಂತದ ಬಣ್ಣದ ಪ್ರಿಂಟ್‌ ಇತ್ತು. ಕೊರಳಿಗೆ ಚೈನ್‌ ಕೂಡ ಹಾಕಿಕೊಂಡಿದ್ದರು.

ಭಾರತೀಯ ಧಾರ್ಮಿಕ ಗ್ರಂಥಗಳಲ್ಲಿ, ನೀಲಿ ಬಣ್ಣವನ್ನು ಶಕ್ತಿ ಮತ್ತು ಶೌರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಸಕಾರಾತಕತೆ ಮತ್ತು ಆತವಿಶ್ವಾಸದ ಜೊತೆಗೆ ಅಧಿಕಾರದ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಾಗಿ ನಿರ್ಮಲಾ ಅದನ್ನು ಧರಿಸಿದ್ದಾರೆ ಎನ್ನಲಾಗಿತ್ತು.

ಒಟ್ಟಾರೆಯಾಗಿ ನಿರ್ಮಲಾ ಸಿತಾರಾಮನ್‌ ಇಂದು ಎಂಟನೇ ಬಜೆಟ್‌ ಮಂಡನೆ ಮಾಡುತ್ತಿದ್ದು, ಪ್ರತಿ ಬಜೆಟ್‌‍ನಲ್ಲಿಯೂ ಭಿನ್ನವಾದ ಸೀರೆಗಳನ್ನು ಉಟ್ಟುಕೊಂಡು ಗಮನ ಸೆಳೆದ ಅವರು ಈ ಬಾರಿಯೂ ಆ ಸಂಪ್ರದಾಯ ಮುಂದುವರಿಸಿದ್ದಾರೆ.

RELATED ARTICLES

Latest News