ವಾರಣಾಸಿ, ಡಿ.22 (ಪಿಟಿಐ)– ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಬುಲಿಯನ್ ವ್ಯಾಪಾರಿ ಮತ್ತು ಅವರ ಮಗನ ಮೇಲೆ ಗುಂಡು ಹಾರಿಸಿ, ಅವರ ಬಳಿಯಿದ್ದ ಚಿನ್ನಾಭರಣ ತುಂಬಿದ ಚೀಲವನ್ನು ದೋಚಿರುವ ಘಟನೆ ಇಂದು ಮುಂಜಾನೆ ಇಲ್ಲಿನ ಕವ್ಚಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಳಗಿನ ಜಾವ 3:30ರ ಸುಮಾರಿಗೆ ಇಲ್ಲಿನ ಗುರುಧಾಮ್ ಕಾಲೋನಿಯ ನಿವಾಸಿ, ಬುಲಿಯನ್ ವ್ಯಾಪಾರಿ ದೀಪಕ್ ಸೋನಿ (46) ಚಿನ್ನಾಭರಣಗಳಿದ್ದ ಬ್ಯಾಗ್‌ನೊಂದಿಗೆ ಮುಂಬೈನಿಂದ ವಾರಣಾಸಿಗೆ ಮರಳಿದ್ದರು.
ಅವರು ವಾರಣಾಸಿ ರೈಲ್ವೆ ನಿಲ್ದಾಣದಿಂದ ತಮ ಮಗನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರೊಂದು ಅವರನ್ನು ಹಿಂದಿಕ್ಕಿತು ಮತ್ತು ಅದರಲ್ಲಿದ್ದವರು ಸೋನಿ ಮತ್ತು ಅವರ ಮಗನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕಾಶಿ ವಲಯದ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಗೌರವ್ ಬನ್ಸಾಲ್ ಹೇಳಿದ್ದಾರೆ.
ಗುಂಡಿನ ದಾಳಿಯಲ್ಲಿ ಸೋನಿ ಮತ್ತು ಅವರ ಮಗ ಇಬ್ಬರೂ ಗಾಯಗೊಂಡಿದ್ದು, ದುಷ್ಕರ್ಮಿಗಳು ಚಿನ್ನಾಭರಣಗಳಿದ್ದ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದಾರೆ. ಸಂತ್ರಸ್ತರನ್ನು ಬಿಎಚ್‌ಯು ಟ್ರಾಮಾ ಸೆಂಟರ್‌ಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.