ಬೆಂಗಳೂರು,ಸೆ.11- ಹೈದರಾಬಾದ್ನಿಂದ ನಗರಕ್ಕೆ ಸ್ಲೀಪರ್ ಕೋಚ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಚಾಲಕ ಅಸಭ್ಯವಾಗಿ ವರ್ತಿಸಿದನೆಂದು ಆರೋಪಿಸಿ ಅರೆ ಬೆತ್ತಲೆಗೊಳಿಸಿ ಥಳಿಸಿರುವ ಘಟನೆ ನಡೆದಿದೆ.
ನಗರದಲ್ಲಿ ವಾಸವಾಗಿರುವ 15 ವರ್ಷದ ಬಾಲಕಿ ಹೈದರಾಬಾದ್ನಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿದ್ದು, ರಾತ್ರಿ ವಾಪಸ್ ಬೆಂಗಳೂರಿಗೆ ಬರಲು ಸ್ಲೀಪರ್ಕೋಚ್ ಬಸ್ಸಿನಲ್ಲಿ ಪ್ರಯಾಣಿಸಿದ್ದಾಳೆ.
ಮಾರ್ಗಮಧ್ಯೆ ಮೊಬೈಲ್ ಸ್ವಿಚ್ಆಫ್ ಆಗಿದ್ದರಿಂದ ಚಾಲಕನಿಗೆ ಚಾರ್ಜ್ ಹಾಕುವಂತೆ ಮೊಬೈಲ್ ಕೊಟ್ಟಿದ್ದು, ಸ್ವಲ್ಪ ಸಮಯದ ಬಳಿಕ ಮೊಬೈಲ್ ತೆಗೆದುಕೊಳ್ಳಲು ಹೋದಾಗ ಬಾಲಕಿ ಜೊತೆ ಆತ ಅಸಭ್ಯವಾಗಿ ವರ್ತಿಸಿದ್ದಾನೆ.
ಬಾಲಕಿ ವಿರೋಧ ವ್ಯಕ್ತಪಡಿಸಿದರೂ ಆಕೆ ಮಲಗಿದ್ದ ಸೀಟ್ ಬಳಿ ಪದೇ ಪದೇ ಹೋಗಿ ಕಿರುಕುಳ ನೀಡಿದ್ದಾನೆ. ಈ ಘಟನೆಯಿಂದ ಎದುರಿದ ಬಾಲಕಿ ತನ್ನ ತಾಯಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಈ ಬಸ್ ಇಂದು ಬೆಳಗ್ಗೆ ನಗರದ ಬಸವೇಶ್ವರ ವೃತ್ತದ ಬಳಿ ಬರುತ್ತಿದ್ದಂತೆ ಬಾಲಕಿಯ ತಾಯಿ ಹಾಗೂ ಸಹೋದರ ಅಲ್ಲಿಗೆ ಬಂದಿದ್ದು, ಚಾಲಕನನ್ನು ಹೊರಗೆಳೆದು ಅರೆ ಬೆತ್ತಲೆಗೊಳಿಸಿ, ಥಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ ಠಾಣೆ ಪೊಲೀಸರು ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.