Sunday, July 21, 2024
Homeರಾಜ್ಯಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ : ಸಚಿವ ರಾಮಲಿಂಗಾರೆಡ್ಡಿ

ಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ನ.6-ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನಾಲ್ಕು ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಸ್ವಾಲಂಬಿಯಾಗಿ ರೂಪಿಸಲು ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ.ಆರ್.ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಸಮಿತಿ ಹಲವು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಆಗಿನ ಮುಖ್ಯಮಂತ್ರಿಯವರಿಗೂ ನೀಡಿದೆ. ತಾವು ಸಚಿವರಾದ ಮೇಲೆ ತಮಗೂ ತಲುಪಿಸಿದೆ ಎಂದು ಹೇಳಿದರು.

ಸಮಿತಿಯ ಶಿಫಾರಸ್ಸಿನಲ್ಲಿ ಪ್ರಮುಖವಾಗಿ ಪ್ರಯಾಣ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಸಮಿತಿ ಮಾದರಿಯಲ್ಲಿ ಪ್ರತ್ಯೇಕವಾದ ಸ್ವಾಯತ್ತ ಸಮಿತಿ ರಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. 2015ರಲ್ಲಿ ದರ ಪರಿಷ್ಕರಣೆಯಾಗಿತ್ತು. ಆ ವೇಳೆ ಡೀಸೆಲ್ ಬೆಲೆ 50ರಿಂದ 60 ರೂ.ನಷ್ಟಿತ್ತು. ಈಗ ತೀವ್ರವಾಗಿ ಏರಿಕೆಯಾಗಿದೆ. ಸಾರಿಗೆ ಸಿಬ್ಬಂದಿಗಳ ವೇತನ 2017 ಮತ್ತು 2022ರಲ್ಲಿ ಪರಿಷ್ಕರಣೆಯಾಗಿದೆ.

ಬಿಡಿಭಾಗಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೂ ಯಾವುದೇ ಸರ್ಕಾರಗಳು ಬಸ್ ಪ್ರಯಾಣ ದರ ಪರಿಷ್ಕರಣೆಗೆ ಅನುಮತಿ ನೀಡುತ್ತಿಲ್ಲ. ಹೀಗೇ ಆದರೆ ಸಾರಿಗೆ ನಿಗಮಗಳು ಶಾಶ್ವತವಾಗಿ ನಷ್ಟದಲ್ಲಿರಬೇಕಾಗುತ್ತದೆ. ಆ ಕಾರಣಕ್ಕೆ ದರ ಪರಿಷ್ಕರಣೆಗೆ ಸ್ವಾಯತ್ತವಾಗಿ ನಿರ್ಣಯ ಕೈಗೊಳ್ಳುವ ಸಮಿತಿ ರಚಿಸುವಂತೆ ಶ್ರೀನಿವಾಸ್‍ಮೂರ್ತಿಯವರು ಶಿಫಾರಸ್ಸು ಮಾಡಿದ್ದಾರೆ.

“ಭಾರತ-ಕೆನಡಾ ಮುನಿಸು ಸದ್ಯಕ್ಕೆ ಮುಗಿಯಲ್ಲ”

ಆ ವರದಿ ಸರ್ಕಾರದ ಮುಂದಿದೆ. ಮುಖ್ಯಮಂತ್ರಿ ಹಾಗೂ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ನಮ್ಮ ಮುಂದೆ ದರ ಏರಿಕೆಯ ಪ್ರಸ್ತಾವನೆ ಇಲ್ಲ ಎಂದು ಹೇಳಿದರು. ರಾಜ್ಯದಲ್ಲಿರುವ 25 ಸಾವಿರ ಹಳ್ಳಿಗಳ ಪೈಕಿ 300ರಿಂದ 400 ಗ್ರಾಮಗಳನ್ನು ಹೊರುತಪಡಿಸಿ ಉಳಿದೆಲ್ಲ ಕಡೆ ಬಸ್ ಸೇವೆ ಒದಗಿಸಲಾಗುತ್ತಿದೆ. ನಷ್ಟವಾದರೂ ಕೂಡ ಜನರಿಗೆ ಸೇವೆ ನೀಡಬೇಕು ಎಂಬ ಕಾರಣಕ್ಕೆ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಮುಂದುವರೆಸುತ್ತದೆ.ಇದರಿಂದಾಗಿ ನಷ್ಟ ಸಹಜ. ಖಾಸಗಿ ಸಾರಿಗೆಯವರು ನಷ್ಟವಾಗುವ ಕಡೆ ಬಸ್ ಸೇವೆ ಒದಗಿಸುವುದಿಲ್ಲ ಎಂದರು.

ಬಿಬಿಎಂಪಿಗೆ ಚುನಾವಣೆ ನಡೆಸಲು ಎಲ್ಲ ರೀತಿಯ ತಯಾರಿಗಳಾಗಿವೆ. ಆದರೆ ಹಿಂದುಳಿದ ವರ್ಗಗಳ ಮೀಸಲಾತಿ ವಿಷಯ ಇತ್ಯರ್ಥವಾಗದ ಹಿನ್ನಲೆಯಲ್ಲಿ ವಿಳಂಬವಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಹಾರಾಷ್ಟ್ರದವರು ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಮೀಸಲಾತಿ ನೀಡಲಾಗಿದೆ. ನಮ್ಮಲ್ಲಿ ಕಾಂತರಾಜು ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಹಿಂದುಳಿದ ಸಮುದಾಯಗಳ ಜನಸಂಖ್ಯೆ ಎಷ್ಟು ಎಂಬುದು ಗೊತ್ತಾಗಲಿದೆ. ಅದನ್ನು ಆಧರಿಸಿ ಮೀಸಲಾತಿ ನೀಡಬಹುದು.

ಪ್ರಸ್ತುತ ಸಂದರ್ಭದಲ್ಲಿ ಒಬಿಸಿ ಮೀಸಲಾತಿ ಇಲ್ಲದೆ ಬಿಬಿಎಂಪಿ ಚುನಾವಣೆ ನಡೆಸಬೇಕಾಗುತ್ತದೆ. ಅದು ಸಾಧ್ಯವಿಲ್ಲ. ಈ ತಿಂಗಳೊಳಗೆ ಒಬಿಸಿ ಮೀಸಲಾತಿ ವಿಷಯ ಇತ್ಯರ್ಥವಾದರೆ ಒಂದು ತಿಂಗಳೊಳಗೆ ಚುನಾವಣೆ ನಡೆಸಲು ಆಯೋಗ ಸಿದ್ದವಿದೆ ಎಂದರು.

RELATED ARTICLES

Latest News