Friday, December 1, 2023
Homeರಾಜ್ಯಬರಕ್ಕಿಂತ ಜೆಡಿಎಸ್-ಬಿಜೆಪಿ ಮೈತ್ರಿಯೇ ಸರ್ಕಾರಕ್ಕೆ ದೊಡ್ಡ ಸಂಕಷ್ಟವಾಗಿದೆ : ಹೆಚ್‌ಡಿಕೆ

ಬರಕ್ಕಿಂತ ಜೆಡಿಎಸ್-ಬಿಜೆಪಿ ಮೈತ್ರಿಯೇ ಸರ್ಕಾರಕ್ಕೆ ದೊಡ್ಡ ಸಂಕಷ್ಟವಾಗಿದೆ : ಹೆಚ್‌ಡಿಕೆ

ಬೆಂಗಳೂರು,ನ.6- ನಾವು ಹಮ್ಮಿಕೊಳ್ಳಲಿರುವ ರೈತ ಸಾಂತ್ವನ ಯಾತ್ರೆ ಬಗ್ಗೆ ಲಘುವಾಗಿ ಹೇಳಿಕೆ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಜೆಡಿಎಸ್-ಬಿಜೆಪಿ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ ಎಂದು ಕಾಲೆಳೆದಿದ್ದಾರೆ.

ಅಲ್ಲದೆ, ವಿಶ್ವ ವಿಖ್ಯಾತ ವಿತ್ತತಜ್ಞ ಎಂದು ಹಾಲಿ ಸಿಎಂಗೆ ಮಾಜಿ ಮುಖ್ಯಮಂತ್ರಿ ಟಾಂಗ್ ನೀಡಿದ್ದಾರೆ. ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿ. ರೈತ ಸಾಂತ್ವನ ಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ ದೊಡ್ಡ ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಜೆಡಿಎಸ್ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ ಎಂದು ವ್ಯಂಗ್ಯವಾಡಿದ್ದಾರೆ.

ರೈತ ಸಾಂತ್ವನ ಯಾತ್ರೆಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ, ಅದಕ್ಕೆ ನಿಮ್ಮ ನೇತೃತ್ವದ ಸರ್ಕಾರ ಎಷ್ಟು ಗಂಭೀರ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರ್ಕಾರ ದ ಅಪರಿಮಿತ ಅಸಡ್ಡೆಯನ್ನು ಅರಿಯದಷ್ಟು ಮುಗ್ಧನೇ ನಾನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ದೆಹಲಿಯ ಬಿ, ಸಿ ಗ್ರೂಪ್ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಎನ್ನುವುದೂ ನಿಜ. ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿಯವರ ಮುಂದೆಯೂ ದನಿ ಎತ್ತುತ್ತೇವೆ, ಅದು ನಮ್ಮ ಬದ್ಧತೆ. ಆದರೆ, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಈ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ ಅಲ್ಲವೇ ಎಂದು ಅವರು ಕುಟುಕಿದ್ದಾರೆ.

236 ತಾಲೂಕುಗಳಲ್ಲಿ 216 ಬರಪೀಡಿತ ಎಂದು ಲೆಕ್ಕ ಕೊಟ್ಟಿದ್ದೀರಿ. 33,710 ಕೋಟಿ ರೂ. ಮËಲ್ಯದ ಬೆಳೆಹಾನಿ ಆಗಿದ್ದು, ಕೇಂದ್ರಕ್ಕೆ 17,901 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಸರಿ. ಜತೆಗೆ 343 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದೂ ತಿಳಿಸಿದ್ದೀರಿ. ಅದನ್ನು ಯಾರಿಗೆ ಹಂಚಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿ ವಿಶ್ವವಿಖ್ಯಾತ ವಿತ್ತತಜ್ಞರಾಗಿ ಮೆರೆಯುತ್ತಿರುವವರು ನೀವು. ಅಕಾರಕ್ಕೆ ಬಂದೊಡನೆ ವಿಶೇಷವಾಗಿ ವಿತ್ತಖಾತೆಯನ್ನು ತಮ್ಮಲ್ಲಿಯೇ ಜೋಪಾನ ಮಾಡಿಕೊಳ್ಳುವ ನಿಮಗೆ, ಕೇಂದ್ರ ಸರ್ಕಾರವು ಬರಕ್ಕೆ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ನೀವು ಕರೆದೊಯ್ಯುವ ಸರ್ವಪಕ್ಷ ನಿಯೋಗದಲ್ಲಿ ಜೆಡಿಎಸ್ ಪಕ್ಷವೂ ಇರುತ್ತದೆ, ನಮ್ಮ ಮಿತ್ರಪಕ್ಷ ಬಿಜೆಪಿಯೂ ಇರುತ್ತದೆ. ಇನ್ನೊಬ್ಬರ ಧೈರ್ಯದ ಬಗ್ಗೆ ಮಾತನಾಡುವ ನೀವು, ನಿಮ್ಮ ಸ್ಥೆ ೈರ್ಯದ ಬಗ್ಗೆಯೂ ಕೊಂಚ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದ ನೆಲ-ಜಲ, ಇನ್ನಿತರೆ ಸಂಕಷ್ಟದ ವೇಳೆ ಈ ಇಳಿವಯಸ್ಸಿನಲ್ಲಿಯೂ ಮಾನ್ಯ ದೇವೇಗೌಡರು ನಡೆಸುತ್ತಿರುವ ಹೋರಾಟ ನಿಮಗೆ ಕಾಣಿಸಿಲ್ಲವೇ? ಕಾವೇರಿ ಬಗ್ಗೆ ಅವರು ಸಂಸತ್ತಿನಲ್ಲಿ ಸಿಡಿದೆದ್ದಾಗ ನಿಮ್ಮ ಪಕ್ಷದ ಸದಸ್ಯರೆಲ್ಲರೂ ಎಲ್ಲಿ ಅವಿತು ಕುಳಿತಿದ್ದರು ಎಂದುಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿನ್ನರ್-ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಕೊಂಡು ಆಪರೇಷನ್ ಹಸ್ತದ ಬಗ್ಗೆಯೇ ನಿಮ್ಮ ಸಚಿವರ ಬಳಿ ಅಲವತ್ತುಕೊಳ್ಳುತ್ತಿದ್ದೀರಿ. ಪಂಚರಾಜ್ಯಗಳಿಗೆ ಹಣ ಹೊಂಚಲು ರಾಜ್ಯವನ್ನು ದೋಚುವುದು ಹೇಗೆಂದು ಗುಟ್ಟು ಗುಟ್ಟಾಗಿ ಪಾಠ ಮಾಡುತ್ತಿದ್ದೀರಿ. ಜೆಡಿಎಸ್, ಬಿಜೆಪಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳನ್ನು ಆಪರೇಷನ್ ಮಾಡಲು ಗುಳ್ಳೆನರಿಗಳಂತೆ ಅವರ ಮನೆಗಳ ಮುಂದೆ ಕತ್ತಲಾದ ಮೇಲೆ ಹೊಂಚು ಹಾಕಿ ಕೂರುತ್ತಿದ್ದೀರಿ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜರ್ಮನ್ ವಿದೇಶಾಂಗ ಸಚಿವೆಯನ್ನು ಚುಂಬಿಸಲೆತ್ನಿಸಿದ ಕ್ರೋವೆಷಿಯನ್ ಸಚಿವ

ಕುತ್ತಿಗೆಗೆ ಗ್ಯಾರಂಟಿ ಬೋರ್ಡ್ ಹಾಕಿಕೊಂಡು ಹಾದಿ-ಬೀದಿಯಲ್ಲಿ ಓಡಾಡುತ್ತಿದ್ದೀರಿ. ಐದು ತಿಂಗಳಿಗೇ ಭದ್ರತೆಯ ಗ್ಯಾರಂಟಿ ಇಲ್ಲದೆ ಬಾಲಗ್ರಹಪೀಡಿತ ನಿಮ್ಮ ಸರ್ಕಾರ ಭಿನ್ನಮತಪೀಡಿತವಾಗಿದೆ. ಕುರ್ಚಿ ಉಳಿಸಿಕೊಳ್ಳಲು ನೀವೂ ಹೆಣಗಾಡುತ್ತಿದ್ದೀರಿ. ಹೌದಲ್ಲವೇ? ಉತ್ತರ ನೀಡಿ ಸನ್ಮಾನ್ಯ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

RELATED ARTICLES

Latest News