ಕರ್ನೂಲ್,ಅ.24-ಬಸ್ ಪೂರ್ತಿ ಬೆಂಕಿ ಆವರಿಸಿದ್ದರಿಂದ ಏನು ಮಾಡಬೇಕೆಂದು ಯೋಚಿಸುತ್ತಿದ್ದಂತೆ ಬೆಂಕಿ ವೇಗವಾಗಿ ಉರಿಯುತ್ತಿದುದ್ದನ್ನು ನೋಡಿ ಒಂದು ಕ್ಷಣ ಆತಂಕವಾಯಿತು.
ಹೈದರಬಾದ್‌ನಿಂದ ಬೆಂಗಳೂರಿಗೆ ಖಾಸಗಿ ವೋಲ್ವೋ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿದ್ರೆಯಲ್ಲಿದ್ದ ನನಗೆ ಶಬ್ದ ಕೇಳಿ ಎಚ್ಚರವಾದಾಗ ಬೆಂಕಿ ಆವರಿಸಿರುವುದು ಕಂಡು ತಕ್ಷಣ ನಾನು ಬಸ್‌ನ ಹಿಂಭಾಗದ ಗಾಜು ಒಡೆದು ಹೊರಗೆ ಹಾರಿದೆ ಎಂದು ಹರಿಕಾ ಎಂಬುವವರು ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದು ಸ್ಲೀಪರ್ ಬಸ್ ಆಗಿದ್ದರಿಂದ ನಾನು ಮೇಲೆ ಹತ್ತಿ ಮಲಗಿದ್ದೆ. ಎಲ್ಲರೂ ಪರದೆ ಹಾಕಿಕೊಂಡು ಅವರವರ ಸೀಟಿನಲ್ಲಿ ಮಲಗಿದ್ದರು. ಎಷ್ಟು ಜನ ಒಳಗಿದ್ದರು ಎಂಬುವುದು ತಿಳಿಯಲಿಲ್ಲ.
ತಕ್ಷಣ ನಾನು ಬಸ್‌ನ ಹಿಂಭಾಗಕ್ಕೆ ಹೋಗಿ ಗಾಜು ಒಡೆದು, ಬಸ್ ಒಳಗೆ ಇದ್ದವರಿಗೂ ಹೊರಗೆ ಹಾರುವಂತೆ ಹೇಳಿ ನಾನು ಬಸ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಬೇರೆ ಸೀಟುಗಳಲ್ಲಿ ಜನರು ಇದ್ದರೋ ಇಲ್ಲವೋ ಎಂದು ನೋಡಲು ಸಹ ಸಾಧ್ಯವಾಗಲಿಲ್ಲ ಎಂದು ಹರಿಕಾ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದ್ದಾರೆ.ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ಸೂರ್ಯ ಎಂಬುವವರು ಘಟನೆ ಬಗ್ಗೆ ತಮಗಾದ ಅನುಭವವನ್ನು ಹೇಳಿಕೊಂಡಿದ್ದು, ಬೆಳಗಿನ ಜಾವ ಒಂದು ಬೈಕ್ ಬಸ್ ಬಳಿ ಬಂತು.ನಂತರ ಏನೋ ಆಯಿತು. ಆದರೆ ನನಗೆ ಆ ಬಗ್ಗೆ ಸ್ಪಷ್ಟತೆ ಇಲ್ಲ. ಬೈಕ್ ಬಸ್‌ನ ಕೆಳಗೆ ಹೋಯಿತು. ಸ್ವಲ್ಪ ದೂರ ಬಸ್ ಹೋಗುತ್ತಿದ್ದಂತೆ ಬೆಂಕಿ ಕಿಡಿ ಬರಲು ಪ್ರಾರಂಭಿಸಿ, ನಂತರ ಬಸ್ ಪೂರ್ತಿ ಬೆಂಕಿ ಹೊತ್ತಿಕೊಂಡಿತು.
ಆ ವೇಳೆ ಬಸ್ ನಿಂತಿದೆ.ನಾನು ಸೇರಿದಂತೆ ಎಚ್ಚರವಿದ್ದವರು ತಕ್ಷಣ ಕೆಳಗೆ ಇಳಿದಿದ್ದಾರೆ. ಕೆಲವರು ಹೊರಗೆ ಬರಲಾಗದೆ ಬಸ್‌ನೊಳಗೆ ಸಜೀವ ದಹನವಾಗಿದ್ದಾರೆಂದು ತಿಳಿಸಿದರು. ಸ್ಥಳಕ್ಕೆ ಧಾವಿಸದ ಅಧಿಕಾರಿಗಳು:ಆಂಧ್ರಪ್ರದೇಶದ ಕರ್ನೂಲ್‌ನಿಂದ ಸುಮಾರು 7 ಕಿ.ಮೀ. ಅಂತರದಲ್ಲಿದ್ದ ಚಿನ್ನೇಕೂರ್ ಬಳಿ ಬಸ್ ಬೆಂಕಿಗಾಹುತಿಯಾಗಿ ಹೊತ್ತಿ ಉರಿಯುತ್ತಿದ್ದರೂ, ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಲಿಲ್ಲ ಎಂದು ಜೀವ ಉಳಿಸಿಕೊಂಡ ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮಾರತ್ತಳ್ಳಿಯ ವೇಮುರಿ ಕಾವೇರಿ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್‌ನಲ್ಲಿ ಎಲ್-13 ಸೀಟ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಣುಗೊಂಡ ಎಂಬ ಪ್ರಯಾಣಿಕ ಅಪಾಯದಿಂದ ಪಾರಾಗಿದ್ದು, ದುರ್ಘಟನೆಯ ಮಾಹಿತಿಯನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮಲ್ಟಿ ಆಕ್ಸಲ್ ಸೌಲಭ್ಯ ಹೊಂದಿತ್ತು.
ವಿಶ್ರಾಂತಿಗಾಗಿ ಮಾರ್ಗಮಧ್ಯೆ 20 ನಿಮಿಷ ನಿಲ್ಲಿಸಿ, ನಂತರ ಪ್ರಯಾಣ ಆರಂಭಿಸಿತು. ಮುಂಜಾನೆ 3.20ರ ಸುಮಾರಿಗೆ ನಮಗೆ ದಿಢೀರ್ ಎಚ್ಚರಿಕೆಯಾಯಿತು. ಕಣ್ಣು ಬಿಟ್ಟು ನೋಡಿದಾಗ ಬಸ್‌ನ ಮುಂಭಾಗಕ್ಕೆ ಬೆಂಕಿ ತಗುಲಿತ್ತು. ಆತಂಕದಿಂದ ಎಲ್ಲರೂ ಬಸ್‌ನ ಹಿಂಭಾಗಕ್ಕೆ ಓಡಿ ಬರುತ್ತಿದ್ದರು. ನಾನು ಹಿಂಬದಿಯಲ್ಲಿದ್ದ ತುರ್ತು ನಿರ್ಗಮನದ ಬಾಗಿಲು ತೆಗೆಯುವ ಪ್ರಯತ್ನ ಮಾಡಿದ್ದೆ, ಅದು ಸಾಧ್ಯವಾಗಲಿಲ್ಲ. ಬಸ್‌ನ ಹಿಂಭಾಗದಲ್ಲಿದ್ದ ಕಿಟಕಿ ಗಾಜನ್ನು ಒಡೆಯುವ ಪ್ರಯತ್ನವೂ ವಿಫಲವಾದಾಗ ನನ್ನ ಹಿಂಬದಿಯಿದ್ದ ಮತ್ತೊಬ್ಬ ಪ್ರಯಾಣಿಕ ಗಾಜು ಪುಡಿ ಮಾಡಿದರು. ಅದರಿಂದ ಸುಮಾರು 15 ಜನ ಕೆಳಗೆ ಜಿಗಿದು ಪಾರಾದರು.
ಆದರೆ ಒಂದೇ ಕುಟುಂಬದ ನಾಲ್ವರು ಬೆಂಕಿಗಾಹುತಿಯಾದರೂ ಅವರನ್ನು ರಕ್ಷಿಸಲಾಗಲಿಲ್ಲ ಎಂದು ಅಳಲು ತೋಡಿಕೊಂಡರು. ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಖಾಸಗಿ ಬಸ್‌ನ ಸಹಾಯದಿಂದ ನಾವು ಬೆಂಗಳೂರಿಗೆ ತಲುಪಿದ್ದೇವೆ. ಈ ವೇಳೆ ನಮ ಲಗೇಜ್‌ಗಳನ್ನು ತೆಗೆದುಕೊಳ್ಳಲಾಗಲಿಲ್ಲ ಸುಟ್ಟು ಹೋಗಿವೆ ಎಂದು ಹೇಳಿದ್ದಾರೆ.
ಬೆಂಕಿ ಹೊತ್ತಿ ಬಸ್ ಉರಿಯುತ್ತಿರುವಾಗ ಬಾಂಬ್ ಸ್ಫೋಟಿಸಿದಂತೆ ದೊಡ್ಡ ಪ್ರಮಾಣದ ಶಬ್ದಗಳು ಬರುತ್ತಿತ್ತು. ಯಾರೂ ಕೂಡ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಬಸ್‌ನ ಒಳಗೆ ಹೊಗೆ ತುಂಬಿತ್ತು. ಏನೂ ಕಾಣಿಸದಂತಹ ವಾತಾವರಣವಿತ್ತು ಎಂದು ಹೇಳಿದ್ದಾರೆ.
27 ವರ್ಷದ ಜಯಂತ್ ಕುಶ್ವಾಹ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಸ್‌ನ ತುರ್ತು ನಿರ್ಗಮನ ದ್ವಾರ ತೆರೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಕರ್ನೂಲ್‌ನಿಂದ 10 ಕಿ.ಮೀ. ದೂರ ಬಂದ ಬಳಿಕ ಭಯಾನಕವಾದ ಈ ಘಟನೆ ನಡೆದಿದೆ. 25 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅವರು ವಿಷಾಧಿಸಿದ್ದಾರೆ.
