ಬೆಂಗಳೂರು,ಮಾ.23- ಹೋಟೆಲ್ ಉದ್ಯಮಿ ಯೊಬ್ಬರ ಕಾರಿನ ಗ್ಲಾಸ್ ಒಡೆದು 7 ಲಕ್ಷ ನಗದನ್ನು ಅಪಹರಿಸಿರುವ ಘಟನೆ ನಿನ್ನೆ ರಾತ್ರಿ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೈದರಾಬಾದ್‌ನ ಹೋಟೆಲ್ ಉದ್ಯಮಿ ಸಯ್ಯದ್ ಸುಲೇಮಾನ್ ಎಂಬುವರು ಹಣ ಕಳೆದುಕೊಂಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ವ್ಯವಹಾರದ ನಿಮಿತ್ತ ಅವರು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದು ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕೆಲವರನ್ನು ಭೇಟಿಯಾಗಿ ವಾಪಸ್ ಹೋಗುವಾಗ ದೇವನಹಳ್ಳಿ ಸರ್ವೀಸ್ ರಸ್ತೆಯ ಎಂಪೈರ್ ಹೋಟೆಲ್ ಸಮೀಪ ಕಾರು ನಿಲ್ಲಿಸಿ ಊಟ ಮಾಡಲು ಹೋಗಿದ್ದಾರೆ.
ಆಗ ರಾತ್ರಿ 9.30 ಸಮಯ. ಮಳೆ ಬರುತ್ತಿತ್ತು. ಆ ಸಂದರ್ಭದಲ್ಲಿ ದರೋಡೆಕೋರರು ಇವರ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ 7 ಲಕ್ಷ ನಗದನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ಸಯ್ಯದ್ ಸುಲೇಮಾನ್ ಅವರು ಊಟ ಮಾಡಿ ವಾಪಸ್ ಕಾರು ಬಳಿ ಬಂದಾಗ ಹಣ ಕಳ್ಳತನವಾಗಿರುವುದು ಗೊತ್ತಾಗಿದೆ.
ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ರಸ್ತೆಗಳಲ್ಲಿನ ಸಿಸಿಟಿವಿ ಪುಟೇಜ್‌ಗಳನ್ನು ಪರಿಶೀಲಿಸುತ್ತಿದ್ದು, ದರೋಡೆಕೋರರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.