ಬೆಂಗಳೂರು,ಡಿ.14- ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಸೇರಿದ 50 ಲಕ್ಷ ಹಣವನ್ನು ಅವರ ಕಾರು ಚಾಲಕನೇ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋರಮಂಗಲದ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬಾರೆಡ್ಡಿ ಎಂಬುವರ ಬಳಿ ಕಳೆದ 8 ತಿಂಗಳಿನಿಂದ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ರಕ್ಷಿತ್ಕುಮಾರ್ ಎಂಬಾತ 50 ಲಕ್ಷ ಹಣದೊಂದಿಗೆ ನಾಪತ್ತೆಯಾಗಿದ್ದಾನೆ. ಸುಬ್ಬಾರೆಡ್ಡಿ ಅವರು ವ್ಯವಹಾರದ ನಿಮಿತ್ತ ತಮ ಸ್ನೇಹಿತರಿಂದ 50 ಲಕ್ಷ ಹಣವನ್ನು ಸಂಗ್ರಹಿಸಿ ಕಾರಿನಲ್ಲಿಟ್ಟು ನಿನ್ನೆ ಮಧ್ಯಾಹ್ನ ಮನೆಗೆ ಊಟಕ್ಕೆ ಹೋಗಿದ್ದಾರೆ.
ಇದೇ ಸಮಯಕ್ಕಾಗಿ ಕಾಯುತ್ತಿದ್ದ ಅವರ ಕಾರು ಚಾಲಕ ರಕ್ಷಿತ್ ಕುಮಾರ್ 50 ಲಕ್ಷ ಹಣವಿದ್ದ ಬ್ಯಾಗ್ನ್ನು ತೆಗೆದುಕೊಂಡು ಕಾರಿನ ಕೀಯನ್ನು ಉದ್ಯಮಿ ಮನೆಯ ಸೆಕ್ಯೂರಿಟಿ ಗಾರ್ಡ್ ಕೈಗೆ ಕೊಟ್ಟು ಪರಾರಿಯಾಗಿದ್ದಾನೆ. ಕೆಲ ಸಮಯದ ಬಳಿಕ ಊಟ ಮಾಡಿಕೊಂಡು ಸುಬ್ಬಾರೆಡ್ಡಿ ಅವರು ಕಾರಿನ ಬಳಿ ಬಂದಾಗ ಚಾಲಕ ಇಲ್ಲದಿರುವ ಬಗ್ಗೆ ಸೆಕ್ಯೂರಿಟಿ ಗಾರ್ಡ್
ತಿಳಿಸಿದ್ದಾರೆ. ತಕ್ಷಣ ಕಾರಿನಲ್ಲಿ ನೋಡಿದಾಗ 50 ಲಕ್ಷ ಹಣ ಇದ್ದ ಬ್ಯಾಗ್ ಇಲ್ಲದಿರುವುದು ಗೊತ್ತಾಗಿದೆ.
ಕೂಡಲೇ ಸುಬ್ಬಾರೆಡ್ಡಿ ಅವರ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಯ ಸುಳಿವು ಪತ್ತೆ ಹಚ್ಚಿದ್ದು, ಶೀಘ್ರದಲ್ಲೇ ಬಂಧಿಸಲಿದ್ದಾರೆ.