ಬೆಂಗಳೂರು, ಜೂ.14-ಶೋಕಿ ಜೀವನಕ್ಕಾಗಿ ಹಣ ಹೊಂದಿಸಲು ಖೋಟಾ ನೋಟು ತಯಾರಿಸಿದ ಟೆಕ್ಸ್ ಟೈಲ್ ಉದ್ಯಮಿಯೊಬ್ಬರ ಪುತ್ರ ಕ್ರಿಷ್‌ಮಾಲಿ (23) ನನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಉದ್ಯಮಿ ಪುತ್ರ ಪಾರ್ಟಿ ಮಾಡುವುದು, ಟ್ರಿಪ್‌ಗೆ ಹೋಗುವುದು ಹೀಗೆ ವಿನಾಕಾರಣ ಸುತ್ತಾಡುತ್ತಾ ದುಂದುವೆಚ್ಚ ಮಾಡುತ್ತಿದ್ದರಿಂದ ಮನೆಯಲ್ಲಿ ಖರ್ಚಿಗೆ ಹಣ ಕೊಡುತ್ತಿರಲಿಲ್ಲ.
ಹೇಗಾದರೂ ಮಾಡಿ ಹಣ ಹೊಂದಿಸಬೇಕೆಂದು ಯೋಚಿಸುತ್ತಿದ್ದಾಗ ಆತನಿಗೆ ಹೊಳೆದಿದ್ದೇ ನಕಲಿ ನೋಟು ತಯಾರಿಸುವ ದುರಾಲೋಚನೆ. ಅದಕ್ಕಾಗಿ ಆತ ಪ್ರಿಂಟರ್ ಸ್ಕ್ಯಾನರ್, ಹಾಗೂ ಪೇಪರ್‌ಗಳನ್ನು ಖರೀದಿಸಿದ್ದಾನೆ.
ನಕಲಿ ನೋಟನ್ನು ಯಾವ ಜಾಗದಲ್ಲಿ ತಯಾರಿಸಬಹುದೆಂದು ಆಲೋಚಿಸಿ ಆನ್‌ಲೈನ್ ಮೂಲಕ ಕಮರ್ಷಿಯಲ್ ಸ್ಟ್ರೀಟ್‌ನ ಹೋಟೇಲ್ ಒಂದರಲ್ಲಿ ರೂಂ ಬುಕ್ ಮಾಡಿದ್ದಾನೆ.ಜೂ.4 ರಂದು ರೂಂ ಬಾಡಿಗೆಗೆ ಪಡೆದುಕೊಂಡು, ಆ ರೂಂ ನಲ್ಲಿ 500 ರೂ.ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡಿದ್ದಾನೆ. ಪ್ರಿಂಟ್ ವೇಳೆ ಹಾಳಾದ ನೋಟುಗಳನ್ನು ರೂಂ ನಲ್ಲಿದ್ದ ಕಸದ ಬುಟ್ಟಿಗೆ ಹಾಕಿದ್ದಾನೆ. ಜೂ.7 ರಂದು ರೂಂ ಖಾಲಿ ಮಾಡುವಾಗ 500 ರೂ. ಮುಖಬೆಲೆಯ 6 ನಕಲಿ ನೋಟುಗಳನ್ನು (3000) ಮ್ಯಾನೇಜರ್‌ಗೆ ನೀಡಿ ತೆರಳಿದ್ದಾನೆ.
ಹೋಟೇಲ್ ಮ್ಯಾನೇಜರ್ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಲು ಹೋದಾಗ 6 ನೋಟುಗಳು ಖೋಟಾ ನೋಟುಗಳೆಂದು ಬ್ಯಾಂಕ್‌ನವರು ವಾಪಸ್ ಕೊಟ್ಟಿದ್ದಾರೆ. ಆ ವೇಳೆ ಹೋಟೇಲ್ ಮ್ಯಾನೇಜರ್‌ಗೆ ಅನುಮಾನ ಬಂದಿದೆ. ಈ ಹಣ ಯಾರು ಕೊಟ್ಟಿರಬಹುದೆಂದು ಯೋಚಿಸುತ್ತಿದ್ದಾಗ, ಹೋಟೇಲ್ ರೂಂ ಬಾಯ್ ಕಸದ ಬುಟ್ಟಿಯಲ್ಲಿದ್ದ ಖೋಟಾ ನೋಟಿನ ಚೂರುಗಳನ್ನು ತಂದು ಮ್ಯಾನೇಜರ್‌ಗೆ ತೋರಿಸಿದ್ದಾನೆ.
ಆ ರೂಂ ನಲ್ಲಿ ಯಾರು ಉಳಿದುಕೊಂಡಿದ್ದರು ಎಂಬ ಬಗ್ಗೆ ದಾಖಲೆ ಪರಿಶೀಲಿಸಿದಾಗ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಉದ್ಯಮಿ ಪುತ್ರನ ಆಧಾರ್‌ಕಾರ್ಡ್ ಲಭ್ಯವಾಗಿದೆ.
ತಕ್ಷಣ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. 500 ರೂ. ಮುಖಬೆಲೆ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ. ಆ ನೋಟುಗಳನ್ನು ಎಲ್ಲೆಲ್ಲಿ ಎಷ್ಟು ನೋಟುಗಳನ್ನು ಚಲಾವಣೆ ಮಾಡಲಾಗಿದೆ, ನಕಲಿ ನೋಟು ಮುದ್ರಿಸುವ ಐಡಿಯಾ ಯಾರು ಕೊಟ್ಟವರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.