Thursday, October 24, 2024
Homeರಾಜ್ಯ3 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ : ಭರತ್‌ ಬೊಮ್ಮಾಯಿ, ಯೋಗೇಶ್ವರ್‌ ನಾಮಪತ್ರ ಸಲ್ಲಿಕೆ

3 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ : ಭರತ್‌ ಬೊಮ್ಮಾಯಿ, ಯೋಗೇಶ್ವರ್‌ ನಾಮಪತ್ರ ಸಲ್ಲಿಕೆ

By-election to 3 assembly constituencies: Bharat Bommai, Yogeshwar file nomination

ಬೆಂಗಳೂರು,ಅ.24- ರಾಜ್ಯದ ಮಿನಿ ಸಮರವೆಂದೇ ಬಿಂಬಿಸಲಾಗಿರುವ 3 ವಿಧಾನಸಭೆ ಉಪಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ಇಂದು ಮಾಜಿ ಸಚಿವ ಯೋಗೇಶ್ವರ್‌ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬಸವರಾಜ ಬೊಮಾಯಿ ಸೇರಿದಂತೆ ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಕಾಂಗ್ರೆಸ್‌‍ನಿಂದ ಎರಡು ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿಯಿಂದ ಒಂದು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ರೋಡ್‌ ಷೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌‍, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌‍ ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ಚುನಾವಣಾ ಕಣ ತೀವ್ರವಾಗಿ ಕಾವೇರತೊಡಗಿದೆ.ಇಂದು ಹೈ ವೋಲ್ಟೇಜ್‌ ಕ್ಷೇತ್ರವೆಂದೇ ಪರಿಗಣಿಸಲಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ತಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ಪುತ್ರ ಭರತ್‌ ಬಸವರಾಜ ಬೊಮಾಯಿ ಅವರು ತಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅನ್ನಪೂರ್ಣ ಇ.ತುಕಾರಾಂ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.

ಈ ಮೂರೂ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ರೋಡ್‌ ಷೋ ನಡೆಸಿ ಅನಂತರ ತಮ ಪಕ್ಷದ ನಾಯಕರು, ಮುಖಂಡರ ಜೊತೆಗೂಡಿ ಚುನಾವಣಾಧಿಕಾರಿಗಳಿಗೆ ತಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಮೂರೂ ಕ್ಷೇತ್ರಗಳಿಗೂ ಆಡಳಿತಾರೂಢ ಕಾಂಗ್ರೆಸ್‌‍ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಈ ಚುನಾವಣೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌‍ ಹೊಂದಾಣಿಕೆ ಮುಂದುವರೆದಿದ್ದು, ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವ ವಿವೇಚನೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರಿಗೆ ನೀಡಲಾಗಿತ್ತು. ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್‌ರವರನ್ನು ಕಣಕ್ಕಿಳಿಸುವ ಪ್ರಯತ್ನ ಫಲ ನೀಡಲಿಲ್ಲ. ಈಗ ಅವರೇ ಎನ್‌ಡಿಎ ಅಭ್ಯರ್ಥಿಯ ಎದುರಾಳಿಯಾಗಿ ಕಾಂಗ್ರೆಸ್‌‍ನಿಂದ ಕಣಕ್ಕಿಳಿದಿದ್ದಾರೆ.ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದರೂ ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಚನ್ನಪಟ್ಟಣ ನಗರದಲ್ಲಿ ಯೋಗೇಶ್ವರ್‌ ನಾಮಪತ್ರ ಸಲ್ಲಿಸುವ ಮುನ್ನ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೋಡ್‌ ಷೋನಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.ಶಿಗ್ಗಾವಿ ನಗರದಲ್ಲಿ ಭರತ್‌ ಬಸವರಾಜ ಬೊಮಾಯಿ ನಾಮಪತ್ರ ಸಲ್ಲಿಸುವ ಮುನ್ನ ರೋಡ್‌ ಷೋ ನಡೆಸಿದರು. ಬಸವರಾಜ ಬೊಮಾಯಿ ಸೇರಿದಂತೆ ಬಿಜೆಪಿಯ ಮುಖಂಡರು ಪಾಲ್ಗೊಂಡಿದ್ದರು.

ಅದೇ ರೀತಿ ಸಂಡೂರಿನಲ್ಲಿ ಅನ್ನಪೂರ್ಣ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ರೋಡ್‌ ಷೋನಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌, ಮಾಜಿ ಸಚಿವ ಬಿ.ನಾಗೇಂದ್ರ, ಸಂಸದ ಇ.ತುಕಾರಾಂ ಹಾಗೂ ಮೊದಲಾದ ಕಾಂಗ್ರೆಸ್‌‍ ಮುಖಂಡರು ಪಾಲ್ಗೊಂಡಿದ್ದರು.

ಅ.18 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ನಿನ್ನೆಯವರೆಗೆ ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಬಹುತೇಕರು ಪಕ್ಷೇತರರಾಗಿದ್ದಾರೆ. ನಿನ್ನೆಯವರೆಗೆ ಶಿಗ್ಗಾವಿಯಲ್ಲಿ 13, ಚನ್ನಪಟ್ಟಣದಲ್ಲಿ 14, ಸಂಡೂರಿನಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿದ್ದವು.29 ಪುರುಷ ಅಭ್ಯರ್ಥಿಗಳು ಹಾಗೂ ಇಬ್ಬರು ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

RELATED ARTICLES

Latest News