Saturday, November 23, 2024
Homeಇದೀಗ ಬಂದ ಸುದ್ದಿ2025ರ ಜುಲೈ ವೇಳೆಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣ : ಸಚಿವ ಪರಮೇಶ್ವರ್

2025ರ ಜುಲೈ ವೇಳೆಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣ : ಸಚಿವ ಪರಮೇಶ್ವರ್

ತುಮಕೂರು,ಸೆ.5- ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ 2025ರ ಜುಲೈ ಮಾಹೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡುತ್ತಿರುವ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ರ ಕಾಮಗಾರಿ ಉದ್ಘಾಟನೆಯಾಗಲಿದೆ ಎಂದರು.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ 1ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದಾರೆ. ಕಾಮಗಾರಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವಾಣಿವಿಲಾಸ ಸಾಗರ ಅಣೆಕಟ್ಟಿಗೆ 1500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಮುಂದಿನ ವರ್ಷ ಅರಸಿಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಂಡು ತುಮಕೂರಿಗೆ ನೀರು ಹರಿಯಲಿದ್ದು, ಇದರಲ್ಲಿ 0.20 ಟಿಎಂಸಿ ನೀರನ್ನು ವಸಂತನರಸಾಪುರಕ್ಕೆ ಕುಡಿಯುವ ಉದ್ದೇಶಕ್ಕಾಗಿ ಪೂರೈಕೆ ಮಾಡಲಾಗುವುದು ಎಂದರು.

ಎತ್ತಿನಹೊಳೆ ಯೋಜನೆಗೊಳಪಡುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಹಂಚಿಕೆಯಾದ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ 5.470 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರಿಗಾಗಿ 2.294 ಟಿಎಂಸಿ, ಸಣ್ಣ ನೀರಾವರಿಯ 113 ಕೆರೆಗಳ ಭರ್ತಿ ಮಾಡಲು 3.446 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಎತ್ತಿನ ಹೊಳೆ ಯೋಜನೆಗಾಗಿ ಅಗತ್ಯವಿರುವ 3117.26 ಎಕರೆ ಪ್ರದೇಶದ ಪೈಕಿ ಸ್ವಾಧೀನಪಡಿಸಿಕೊಂಡ 2022 ಎಕರೆ ವಿಸ್ತೀರ್ಣದ ಭೂಮಿಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಈವರೆಗೂ ಶೇ.80ರಷ್ಟು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಮಾಲೀಕರಿಗೆ ಅವಾರ್ಡ್ ಹಣ ವಿತರಿಸಲು ಸರ್ಕಾರದಿಂದ 1200 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಈಗಾಗಲೇ ಭೂ ಮಾಲೀಕರಿಗೆ 448 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಉಳಿದ 434 ಕೋಟಿ ರೂ. ಗಳು ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿಗಳ ಖಾತೆಯಲ್ಲಿದೆ. ಭೂ ಮಾಲೀಕರಿಂದ ಅಗತ್ಯ ದಾಖಲೆಗಳು ಸಲ್ಲಿಕೆಯಾಗಿ ಅನುಮೋದನೆಗೊಂಡ ನಂತರ ಅವಾರ್ಡ್ ಹಣವನ್ನು ನೀಡಲಾಗುವುದು ಎಂದರು.

ಭದ್ರಾ ಮೇಲ್ದಂಡೆ :
ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೊರಟಗೆರೆ ತಾಲ್ಲೂಕಿನ ಬೈರಗೊಂಡನಹಳ್ಳಿ ಗ್ರಾಮದಲ್ಲಿ 2500 ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 2500 ಎಕರೆ ಸೇರಿ ಒಟ್ಟು 5000 ಎಕರೆ ಭೂಮಿಯಲ್ಲಿ ಕೈಗೊಳ್ಳಲು ಭದ್ರಾ ಮೇಲ್ದಂಡೆ ಯೋಜನೆಯನ್ನು ರೂಪಿಸಲಾಗಿತ್ತು.

ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಭೂಸ್ವಾಧೀನ ದರವನ್ನು ಪ್ರತಿ ಎಕರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿಗೆ 32ಲಕ್ಷ ಹಾಗೂ ಕೊರಟಗೆರೆ ತಾಲ್ಲೂಕಿಗೆ 12 ಲಕ್ಷ ರೂ.ಗಳೆಂದು ನಿಗಧಿಪಡಿಸಿದ್ದರಿಂದ ಕೊರಟಗೆರೆ ತಾಲ್ಲೂಕಿನ ರೈತರು ಈ ಯೋಜನೆ ನಮಗೆ ಬೇಡವೆಂದು ನಿರಾಕರಿಸಿದಾಗ ಸರ್ಕಾರವು ಯೋಜನೆಯನ್ನು ಕೈಬಿಟ್ಟಿತು ಎಂದರು.

ಪೂರ್ಣಗೊಂಡ ಕಾಲುವೆಗಳ ವಿವರ :
ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ ತಿಪಟೂರಿನಲ್ಲಿ 43.45 ಕಿ.ಮೀ, ಚಿಕ್ಕನಾಯಕನಹಳ್ಳಿ 12.75 ಕಿ.ಮೀ, ತುರುವೆಕೆರೆ 2.15 ಕಿ.ಮೀ, ಗುಬ್ಬಿ 41.48 ಕಿ.ಮೀ, ತುಮಕೂರು ಗ್ರಾಮಾಂತರ 31.8, ಕೊರಟಗೆರೆ 19.091, ಮಧುಗಿರಿ(ಫೀಡರ್ ಕಾಲುವೆ) 40.90 ಕಿ.ಮೀ, ಪಾವಗಡ 42.10 ಕಿ.ಮೀ. ಕಾಲುವೆ ಹಾದು ಹೋಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News