ಬೆಂಗಳೂರು, ಜೂ.17-ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ತೆರಿಗೆ ಪ್ರಮಾಣವನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುವ ಬದಲು ನಮ ರಾಜ್ಯದಿಂದಲೇ ಮೊದಲು ಕಡಿಮೆ ಮಾಡಿ ನಂತರ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಮೇಲೆ ಯಾವಾಗಲೂ ಗೂಬೆ ಕೂರಿಸಿ ತಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಬೇರೆ ರಾಜ್ಯಗಳ ಉದಾಹರಣೆ ಕೊಡುವುದು ನಮಗೆ ಬೇಡ. ಮೊದಲು ಕರ್ನಾಟಕದಿಂದಲೇ ಕಡಿಮೆ ಮಾಡಿ ಬಳಿಕ ಇನ್ನೊಂದು ರಾಜ್ಯದ ಉದಾಹರಣೆ ಕೊಡಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ಬೆಲೆ ಏರಿಕೆ ಹೆಚ್ಚಳ ಜನರಿಗೆ ಬರದ ಗ್ಯಾರಂಟಿ ಕೊಡುತ್ತಿದೆ. ಇದೊಂದು ಜನ ವಿರೋಧಿ ಸರ್ಕಾರ. ಬಡವರ ಮೇಲಿನ ತೆರಿಗೆ ಬರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ನಾಡಗೌಡರೇ ಸರ್ಕಾರದ ಬಳಿ ಹಣವಿಲ್ಲವೆಂದು ಹೇಳಿದ್ದಾರೆ. ನನ್ನ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಬೆದರಿಕೆ ಹಾಕಿದ್ದಾರೆ.ಒಂದು ಕಡೆ ಭ್ರಷ್ಟಾಚಾರ ಮತ್ತೊಂದು ಸಿಎಂ ಸಿದ್ದರಾಮಯ್ಯನವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರದ ವಿರೋಧಿ ಧೋರಣೆಯನ್ನು ವಿರೋಧಿಸಿ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದಿದ್ದರೆ ನಾವು 10 ರೂ. ದರವನ್ನು ಕಡಿಮೆ ಮಾಡುತ್ತಿದ್ದೆವು. ಸಿದ್ದರಾಮಯ್ಯನವರು ಹಿಂದೆ ತಾವೇ ಹೇಳಿದ ಮಾತನ್ನು ಮರೆತು ಬಿಟ್ಟಿದ್ದಾರ.ಪೆಟ್ರೋಲ್ ಡೀಸೆಲ್ ದರ ಹೆಚ್ಚಳದಿಂದಾಗಿ ಆಟೋ, ಟ್ಯಾಕ್ಸಿ ದರವು ಹೆಚ್ಚಳವಾಗುತ್ತದೆ. ನಮ ಹೋರಾಟಕ್ಕೆ ಜೆಡಿಎಸ್ ಕೂಡ ಬೆಂಬಲ ಕೊಡಲಿದೆ ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧ ಕೇಳಿಬಂದಿರುವ ಆರೋಪ ಕುರಿತಂತೆ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಯಾವುದೇ ಕಾರಣಕ್ಕೂ ಹೆದರಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದದ ಸಂದರ್ಭದಲ್ಲಿ ನ್ಯಾಯಾಧೀಶರೇ ಯಡಿಯೂರಪ್ಪ ಕಾನೂನಿಗೆ ಬೆನ್ನು ತೋರಿಸುವ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.