Friday, November 22, 2024
Homeರಾಜ್ಯಲೋಕಸಭೆ ಸೀಟು ಹಂಚಿಕೆ, ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಯತ್ತ ವಿಜಯೇಂದ್ರ

ಲೋಕಸಭೆ ಸೀಟು ಹಂಚಿಕೆ, ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಯತ್ತ ವಿಜಯೇಂದ್ರ

ಬೆಂಗಳೂರು,ಡಿ.20- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಹಾಗೂ ಜಂಟಿ ಪ್ರಚಾರದ ಕಾರ್ಯತಂತ್ರ ಕುರಿತಂತೆ ವರಿಷ್ಠರೊಂದಿಗೆ ಚರ್ಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಜೆ ನವದೆಹಲಿಗೆ ತೆರಳುತ್ತಿದ್ದಾರೆ. ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಮಾತುಕತೆ ನಡೆಸಲು ನವದೆಹಲಿಗೆ ತೆರಳುತ್ತಿರುವ ಬೆನ್ನಲ್ಲೇ ವಿಜಯೇಂದ್ರ ಕೂಡ ದೆಹಲಿಗೆ ಹೊರಟಿರುವುದು ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ, ನಾಳೆ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಅವರು ಜೆ.ಪಿ.ನಡ್ಡಾ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಗೃಹಸಚಿವ ಅಮಿತ್ ಷಾ ಅವರುಗಳನ್ನು ಭೇಟಿಯಾಗಿ ಲೋಕಸಭೆ ಚುನಾವಣೆಗೆ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.

ಒಂದು ಕಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಈ ತಿಂಗಳ ಅಂತ್ಯಕ್ಕೆ ಸೀಟು ಹಂಚಿಕೆ ಹಾಗೂ ಜಂಟಿ ಪ್ರಚಾರ ಕುರಿತಂತೆ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿರುವ ಬೆನ್ನಲ್ಲೆ ರಾಜ್ಯದಲ್ಲೂ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್‍ಗೆ ಠಕ್ಕರ್ ಕೊಡಲು ಮೈಕೊಡವಿ ಎದ್ದಿದೆ.

2024 ರ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ತಿಂಗಳ ಅಂತ್ಯಕ್ಕೆ ಸೀಟು ಹಂಚಿಕೆ ಕುರಿತಾಗಿ ಉಭಯ ಪಕ್ಷಗಳ ಮುಖಂಡರು ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಕುಮಾರಸ್ವಾಮಿ ಅವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಾಥ್ ನೀಡುತ್ತಿದ್ದು, ನಾಳಿನ ಸಭೆಯಲ್ಲಿ ಜೆಡಿಎಸ್ 28 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಮೂಲಗಳ ಪ್ರಕಾರ, ಜೆಡಿಎಸ್ 28 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕೆಂಬ ಬೇಡಿಕೆಯನ್ನು ಇಟ್ಟಿದೆ ಎಂದು ತಿಳಿದುಬಂದಿದೆ. ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಮೈಸೂರು-ಕೊಡಗು ಕ್ಷೇತ್ರಗಳನ್ನು ತನಗೆ ನೀಡಬೇಕೆಂಬ ಬೇಡಿಕೆಯನ್ನು ಪ್ರಮೋದ್ ಸಾವಂತ್ ಮೂಲಕ ಮಾಹಿತಿ ನೀಡಿದೆ.

ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಅಪಮಾನ, ಪ್ರಧಾನಿ ಮೋದಿ ಬೇಸರ

ಆದರೆ ಇದರಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಕ್ಷೇತ್ರ ಹೊರತುಪಡಿಸಿದರೆ ಉಳಿದ ನಾಲ್ಕು ಕಡೆ ಬಿಜೆಪಿ ಅಭ್ಯರ್ಥಿಗಳೇ ಇರುವುದರಿಂದ ಈ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಜೆಪಿ ಬಿಟ್ಟುಕೊಡಲಿದೆಯೇ ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ. ಉಳಿದಂತೆ ಸೀಟು ಹಂಚಿಕೆ ನಂತರ ಜನವರಿ ತಿಂಗಳ ಮಧ್ಯದಲ್ಲಿ ಮಧ್ಯಕರ್ನಾಟಕದ ಪ್ರಮುಖ ಸ್ಥಳವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ ಜಂಟಿ ಪ್ರಚಾರಕ್ಕೆ ಚಾಲನೆ ಕೊಡುವ ಲೆಕ್ಕಾಚಾರದಲ್ಲಿ ಉಭಯ ಪಕ್ಷಗಳ ಮುಖಂಡರು ಇದ್ದಾರೆ.

ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿಯಾಗಲಿರುವ ವಿಜಯೇಂದ್ರ, ಪಕ್ಷದ ವಿದ್ಯಮಾನಗಳ ಕುರಿತಂತೆ ಮಾಹಿತಿಯನ್ನು ನೀಡಲಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳಿಂದ ಪಕ್ಷದ ಸಂಘಟನೆಗೆ ಹಾನಿಯಾಗುತ್ತಿದ್ದು, ಕಡಿವಾಣ ಹಾಕಲು ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News