ಬೆಂಗಳೂರು,ಡಿ.30- ಗುತ್ತಿಗೆದಾರ ಸಚಿನ್ ಪಾಂಚಳ್ ಆತಹತ್ಯೆ ಪ್ರಕರಣ ಸರ್ಕಾರಿ ಪ್ರಾಯೋಜಿತ ಆತಹತ್ಯೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಜವಾದ ಅಹಿಂದ ನಾಯಕರಾಗಿ ತಾವೊಬ್ಬ ಬಲಿಷ್ಠ ಎನ್ನುವಂತಿದ್ದರೆ ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಮನೆಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಪಾಂಚಲ್ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದಿದ್ದರೆ ಶೀಘ್ರವೇ ಪ್ರಕರಣವನ್ನು ಸಿಬಿಐಗೆ ಕೊಡಲಿ. ಆಗ ನಾವು ನಿಮನ್ನು ಅಹಿಂದ ನಾಯಕ, ಬಲಿಷ್ಠ ಸಿಎಂ ಎಂದು ಒಪ್ಪುತ್ತೇವೆ ಎಂದು ಹೇಳಿದರು. ಇದು ಗಂಭೀರವಾದ ಪ್ರಕರಣವಾಗಿರುವುದರಿಂದ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಇಲ್ಲ. ಮುಖ್ಯಮಂತ್ರಿಗಳಿಗೆ ದೇವರು ಬುದ್ದಿ ಕೊಡಬೇಕೆಂದು ಪಾರ್ಥಿಸುತ್ತೇವೆ. ಡಿ.3ರವರೆಗೂ ನಾವು ಕಾಯುತ್ತೇವೆ. ಇಲ್ಲದಿದ್ದರೆ ಡಿ.4ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರಕರಣದ ಆರೋಪಿಯಾಗಿರುವ ರಾಜು ಕಪ್ಪನೂರ ಅವರು ಪ್ರಿಯಾಂಕ ಖರ್ಗೆ ಅವರ ಆಪ್ತರು. ಸಚಿನ್ ಪಾಂಚಲ್ ಕುಟುಂಬ ಬಡತನದಲ್ಲಿದೆ. ಅವರಿಗೆ ನ್ಯಾಯ ಕೊಡಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಗುತ್ತಿಗೆ ಕೊಡಿಸಲು 5% ಹಣ ಕೊಡಬೇಕೆಂದು ಡೆತ್ನೋಟ್ನ 13ನೇ ಪುಟದಲ್ಲಿ ಬರೆದಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.
ರಾಜು ಕಪ್ಪನೂರ ಅವರು ಪ್ರಿಯಾಂಕ ಖರ್ಗೆ ಆಪ್ತರು. ಸಚಿವರಿಗೆ ಇವರ ಬೆಂಬಲ ಇದೆ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ. ಅವರ ಕುಟುಂಬದವರು ದೂರು ಕೊಟ್ಟರೆ ಪೊಲೀಸರು ಸ್ಪಂದಿಸಿಲ್ಲ. ಠಾಣೆಯಿಂದ ಠಾಣೆಗೆ ಅಲಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ದೂರು ಕೊಟ್ಟ ತಕ್ಷಣ ಪೊಲೀಸರು ಸ್ಪಂದಿಸಿದ್ದರೆ ಸಚಿನ್ ಪಾಂಚಲ್ ಜೀವ ಉಳಿಯುತ್ತಿತ್ತೆಂದು ಕುಟುಂಬದವರು ಹೇಳಿದ್ದಾರೆ. ದೂರು ದಾಖಲಿಸದಂತೆ ಕೆಲವರು ಒತ್ತಡ ಹಾಕಿದ್ದಾರೆ. ಅಲ್ಲಿರುವ ಸ್ಟೇಷನ್ಗಳು ಒಂದು ರೀತಿ ಕಾಂಗ್ರೆಸ್ ಕಚೇರಿಗಳಾಗಿವೆ. ಏಕೆಂದರೆ ಅಲ್ಲಿನ ಜನರೇ ಇದನ್ನು ಮಾತನಾಡುತ್ತಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಅಲ್ಲಿನ ಪ್ರತಿಯೊಬ್ಬ ಪೊಲೀಸರು ಖರ್ಗೆ ಕುಟುಂಬದ ಪರವಾಗಿಯೇ ಕೆಲಸ ಮಾಡುತ್ತಾರೆ. ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ. ಪ್ರಿಯಾಂಕ ಖರ್ಗೆ ತಾವೊಬ್ಬರೇ ಮಹಾನ್ ಮೇಧಾವಿ ಎಂದುಕೊಂಡಿರಬೇಕು. ಸರ್ಕಾರದ ಪ್ರತಿ ವಿಷಯದಲ್ಲೂ ಮೂಗು ತೂರಿಸುವುದು, ತಾನೊಬ್ಬನೇ ಕಾನೂನು ಪಂಡಿತನೆ ಅಂದುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹಿಂದೆ ಇಂಥ ಪ್ರಕರಣಗಳು ನಡೆದಾಗ ಕೆ.ಎಸ್.ಈಶ್ವರಪ್ಪ , ಗಣಪತಿ ಆತಹತ್ಯೆ ಪ್ರಕರಣದಲ್ಲಿ ಸಚಿವ. ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ಸಿಬಿಐ ತನಿಖೆ ನಡೆದ ಮೇಲೆ ಜಾರ್ಜ್ಗೆ ಕ್ಲೀನ್ಚೀಟ್ ಕೊಟ್ಟಿದ್ದನ್ನು ಮರೆಯಬಾರದು. ಹೀಗಾಗಿ ಪ್ರಿಯಾಂಕ ಖರ್ಗೆ ಒಂದು ಕ್ಷಣವೂ ಕೂಡ ಸಚಿವರಾಗಿ ಮುಂದುವರೆಯಬಾರದು. ತಕ್ಷಣವೇ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಸಚಿನ್ ಕುಟುಂಬಕ್ಕೆ ಭದ್ರತೆ ನೀಡುವುದು, ಒಂದು ಕೋಟಿ ರೂ. ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬ ವರ್ಗದವರಿಗೆ ಸರ್ಕಾರಿ ನೌಕರಿ ಕೊಡಿಸಬೇಕು. ಬಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ನಮ ಹೋರಾಟವಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಸಿದ್ದಲಿಂಗ ಸ್ವಾಮೀಜಿಗಳ ದನಿ ಹತ್ತಿಕ್ಕಲು ಮಹಾರಾಷ್ಟ್ರದಿಂದ ಸುಫಾರಿ ಕಿಲ್ಲರ್ಗಳನ್ನು ಕರೆಸಿ ಹತ್ಯೆ ನಡೆಸಲು ಸಂಚು ರೂಪಿಸಲಾಗಿತ್ತು. ಇದು ಕೂಡ ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ ಎಂದರು.
ನಾನೇಕೆ ರಾಜೀನಾಮೆ ಕೊಡಲಿ ಎಂದು ಮಹಾನ್ ಕಾನೂನು ಪಂಡಿತರಂತೆ ಪ್ರಿಯಾಂಕ ಖರ್ಗೆ ಮಾತನಾಡುತ್ತಾರೆ. ಡೆತ್ನೋಟ್ನಲ್ಲಿ ನಿಮ ರಾಜ ಕಪ್ಪನೂರ ಬಗ್ಗೆ ಏನು ಬರೆದಿದ್ದಾರೆ ಎಂದು ಒಮೆ ನೋಡಿಕೊಳ್ಳಲಿ. 5% ಕಮೀಷನ್ ಯಾರಿಗೆ ಹೋಗುತ್ತಿತ್ತು ಎಂಬುದನ್ನು ತಾಕತ್ತಿದ್ದರೆ ಖರ್ಗೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಇದೇ ವೇಳೆ ಪ್ರಿಯಾಂಕ ಖರ್ಗೆ ಮತ್ತು ರಾಜು ಕಪ್ಪನೂರ ಜೊತೆಯಾಗಿರುವ ಫೋಟೋಗಳನ್ನು ವಿಜಯೇಂದ್ರ ಬಿಡುಗಡೆ ಮಾಡಿದರು. ಇವರು ತುಂಬ ಪ್ರಭಾವಿಶಾಲಿಗಳು. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೊಡೆಯ ಮೇಲೆ ಕೂರಿಸಿಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರ ಪೋಕ್ಸೊ ಪ್ರಕರಣದ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ ಮೊದಲು ನಿಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದನ್ನು ನೋಡಿಕೊಳ್ಳಲಿ. ಇನ್ನೊಬ್ಬರ ಬಗ್ಗೆ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ನಿಮ ದುರಹಂಕಾರ ನಿಮನ್ನೇ ಬಲಿ ಪಡೆಯುತ್ತದೆ ಎಂದು ಎಚ್ಚರಿಸಿದರು.
ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ನಮ ಗೃಹಸಚಿವರು ತುಮಕೂರಿಗೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಂದ ತಪ್ಪಾಗಿದೆ ಎಂದು ಸ್ವತಃ ಈಶ್ವರ್ ಖಂಡ್ರೆ ಹೇಳಿದ ಮೇಲ ಮೊಂಡಾಟ ಏಕೆ ಎಂದು ಕಿಡಿಕಾರಿದರು.
ಪೋಕ್ಸೊ ಪ್ರಕರಣದ ಬಗ್ಗೆ ಪ್ರಿಯಾಂಕ ಖರ್ಗೆಯಿಂದ ನಾವು ಹೇಳಿಸಿಕೊಳ್ಳುವುದು ಏನೂ ಉಳಿದಿಲ್ಲ. ರೀ ಪ್ರಿಯಾಂಕ ಖರ್ಗೆ ನೀವೇನು ಕಾನೂನು ತಜ್ಞರಾ? ಮೊದಲು ನಿಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂಬುದನ್ನು ಮರೆಯಬೇಡಿ ಎಂದು ವಿಜಯೇಂದ್ರ ಗುಡುಗಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಇದ್ದರು.