Thursday, September 19, 2024
Homeರಾಜಕೀಯ | Politicsಬಿಜೆಪಿಯೊಳಗಿನ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕುವುದೇ ವಿಜಯೇಂದ್ರಗೆ ಸವಾಲು

ಬಿಜೆಪಿಯೊಳಗಿನ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕುವುದೇ ವಿಜಯೇಂದ್ರಗೆ ಸವಾಲು

BY Vijayendra face challenge of fight within BJP

ಬೆಂಗಳೂರು,ಸೆ.13– ಆರ್ಎಸ್ಎಸ್ ನಾಯಕರ ಮಧ್ಯಪ್ರವೇಶದಿಂದಾಗಿ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿಯೊಳಗಿನ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕುವುದೇ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸವಾಲಾಗಿ ಪರಿಣಮಿಸಿದೆ.
ಸಂಘ ಪರಿವಾರ ನಾಯಕರ ಮಧ್ಯಪ್ರವೇಶದಿಂದ ಹಾವು ಮುಂಗುಸಿಯಂತಿದ್ದ ವಿಜಯೇಂದ್ರ ಹಾಗೂ ಯತ್ನಾಳ್ ತಂಡವನ್ನು ಸದ್ಯಕ್ಕೆ ಒಗ್ಗೂಡಿಸುವಲ್ಲಿ ಆರ್ಎಸ್ಎಸ್ ನಾಯಕರು ಯಶಸ್ವಿಯಾಗಿದ್ದಾರೆ.

ಪರಸ್ಪರ ಮುಖ ಕೊಟ್ಟು ಮಾತನಾಡದ ಸ್ಥಿತಿಯಲ್ಲಿದ್ದ ಬಿಜೆಪಿಯ ನಿಷ್ಠಾವಂತ ಮತ್ತು ಭಿನ್ನಮತೀಯ ನಾಯಕರು ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆಂದು ಹಿರಿಯರ ಬಳಿ ವಾಗ್ದಾನ ಮಾಡಿದ್ದಾರೆ.ಆದರೆ ಯತ್ನಾಳ್ ಹಾಗೂ ಅವರ ತಂಡವನ್ನು ನಿಭಾಯಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ವಿಜಯೇಂದ್ರ ಅವರಿಗೆ ಅಷ್ಟು ಸುಲಭವಲ್ಲ ಎಂದು ಪಕ್ಷದವರೇ ಹೇಳುತ್ತಿದ್ದಾರೆ.

ಏಕೆಂದರೆ ಯತ್ನಾಳ್ ಬಣದಲ್ಲಿರುವ ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ್ ಮತ್ತಿತರರು ಒಂದಲ್ಲೊಂದು ರೀತಿ ಸಿಎಂ ಸಿದ್ದಾರಾಮಯ್ಯನವರ ಜೊತೆ ಅನ್ಯೋನ್ಯವಾಗಿಯೇ ಇದ್ದಾರೆ.

ಮೇಲ್ನೋಟಕ್ಕೆ ಯತ್ನಾಳ್ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿಕೊಂಡರೂ ಅವರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಯಥೇಚ್ಚವಾಗಿ ಅನುದಾನ ಬಿಡುಗಡೆ ಹಾಗೂ ಅಧಿಕಾರಿಗಳ ವರ್ಗಾವಣೆ ಶರವೇಗದಲ್ಲಿ ನಡೆಯುತ್ತದೆ ಎಂಬ ಅಸಮಧಾನ ಬಿಜೆಪಿಯಲ್ಲೇ ಕೇಳಿಬರುತ್ತಿದೆ.

ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ, ಜೆಡಿಎಸ್ ಜಂಟಿ ಪಾದಯಾತ್ರೆ ನಡೆಯುತ್ತಿದ್ದಾಗ ಪಕ್ಷಕ್ಕೆ ಉದ್ದೇಶಪೂರ್ವಕವಾಗಿ ಮುಜುಗರವಾಗಲೆಂದು ಹೇಳಿಕೆ ಕೊಟ್ಟಿದ್ದು ಯತ್ನಾಳ್.

ಇದು ಸರ್ಕಾರದ ಸೂಚನೆ ಮೇರೆಗೆ ಯತ್ನಾಳ್ ಹಾಗೂ ಅವರ ತಂಡ ಉದ್ದೇಶಪೂರ್ವಕವಾಗಿಯೇ ಬಿಜೆಪಿಯನ್ನು ವಿಶೇಷವಾಗಿ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ನಡೆಸಿದ ವ್ಯವಸ್ಥಿತ ಷಡ್ಯಂತರ ಎಂಬ ಗುಸುಗುಸು ಜಗನ್ನಾಥ ಭವನದಲ್ಲಿ ರಿಂಗಣಿಸುತ್ತಿದೆ.

ಮುಂದಿನ ದಿನಗಳಲ್ಲಿ ನಾವು ಪಕ್ಷದ ಅಣತಿಯಂತೆ ನಡೆದುಕೊಳ್ಳುತ್ತೇವೆ ಎಂದು ಯತ್ನಾಳ್ ಹೇಳಿಕೊಂಡಿದ್ದರೂ ಅವರ ಮಾತನ್ನು ಯಾರೂ ಕೂಡ ಅಷ್ಟು ಸುಲಭವಾಗಿ ನಂಬುವ ಸ್ಥಿತಿಯಲ್ಲಿಲ್ಲ.

ಕ್ಷಣಚಿತ್ತ ಕ್ಷಣಪಿತ್ತ ಎಂಬಂತಿರುವ ಯತ್ನಾಳ್ ಯಾವಾಗ ಸ್ವಪಕ್ಷೀಯರ ವಿರುದ್ಧವೇ ತಿರುಗಿಬೀಳುತ್ತಾರೆ. ಇನ್ನ್ಯಾವಾಗ ಪಕ್ಷದ ಪರವಾಗಿರುತ್ತಾರೆ ಎಂಬುದು ಸ್ವತಃ ಅವರ ಮನೆಯ ಸದಸ್ಯರಿಗೇ ಗೊತ್ತಿಲ್ಲ ಎಂದು ಹತ್ತಿರದವರೇ ಹೇಳುತ್ತಾರೆ.ಸದ್ಯದಲ್ಲೇ ನಡೆಯಲಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲುವ ಅನಿವಾರ್ಯತೆ ಬಿಜೆಪಿಗಿದೆ.

ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 19ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿತ್ತು.ಆದರೆ ಲೋಕಸಭೆ ಚುನಾವಣೆ ನಂತರ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದ್ದು, ಒಂದು ಕಡೆ ಕಾಂಗ್ರೆಸ್ ಪುಟಿದೆದ್ದಿದ್ದರೆ ಬಿಜೆಪಿ ಆಂತರಿಕ ಕಚ್ಚಾಟದಿಂದ ಬಳಲುತ್ತಿದೆ. ಮೂರು ಸ್ಥಾನಗಳಲ್ಲಿ ಕಡೆಪಕ್ಷ ಎರಡು ಸ್ಥಾನಗಳನ್ನಾದರೂ ಗೆದ್ದರೆ ವಿಜಯೇಂದ್ರ ನಾಯಕತ್ವಕ್ಕೆ ಒಂದಿಷ್ಟು ಶಕ್ತಿ ಬರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿಜಯೇಂದ್ರ ಎಲ್ಲರನ್ನೂ ನಿಭಾಯಿಸಿಕೊಂಡು ಪಕ್ಷ ಮುನ್ನಡೆಸುವ ಹೊಣೆಗಾರಿಕೆ ಅವರ ಮೇಲಿದೆ.

RELATED ARTICLES

Latest News