ಬೆಂಗಳೂರು,ಜ.9- ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿರುವ ಬೆನ್ನಲ್ಲೇ ಅಧ್ಯಕ್ಷ ವಿಜಯೇಂದ್ರ ಅವರು ನಾಳೆ ಮಾಜಿ ಶಾಸಕರು ಮತ್ತು ಸಚಿವರ ಔತಣಕೂಟ ಕರೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ನಾಳೆ ಮಧ್ಯಾಹ್ನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮಾಜಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ವಿಜಯೇಂದ್ರ ಔತಣಕೂಟ ಏರ್ಪಡಿಸಿದ್ದು, ಸಭೆಗೆ ಕಡ್ಡಾಯವಾಗಿ ಎಲ್ಲರೂ ಆಗಮಿಸಬೇಕೆಂದು ಸೂಚನೆ ನೀಡಲಾಗಿದೆ.
ಮೇಲ್ನೋಟಕ್ಕೆ ಇದೊಂದು ಪಕ್ಷದ ಸಂಘಟನೆ ಕುರಿತಾಗಿ ನಡೆಯಲಿರುವ ಸಭೆ ಎಂದೇ ಹೇಳಲಾಗುತ್ತಿದೆಯಾದರೂ ಬಿಜೆಪಿ ಒಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್, ಅಣ್ಣಾ ಸಾಹೇಬ್ ಜೊಲ್ಲೆ ಮತ್ತಿತರರು ನಡೆಸುತ್ತಿರುವ ಪ್ರತ್ಯೇಕ ಸಭೆಗೆ ಪರ್ಯಾಯವಾಗಿ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತದೆ.
ಇನ್ನು ವಿಜಯೇಂದ್ರ ಬಣದವರು ಇದೊಂದು ಮುಂದುವರೆದ ಸಭೆಯಷ್ಟೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ, ಬಿಬಿಎಂಪಿ ಸೇರಿದಂತೆ ಪಕ್ಷ ಸಂಘಟನೆ ಕುರಿತಾಗಿ ಚರ್ಚಿಸಲು ಸಭೆ ಕರೆಯಲಾಗಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬಿಜೆಪಿ ಮೂಲಗಳ ಪ್ರಕಾರ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಅಂತಹ ಸಂದರ್ಭದಲ್ಲಿ ತಮ ಪರವಾಗಿ ಬೆಂಬಲ ಸೂಚಿಸಬೇಕೆಂದು ಆಪ್ತರಿಗೆ ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಈಗಿನ ಬಲಾಬಲದಲ್ಲಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುವ ಸಾಧ್ಯತೆಗಳೇ ಹೆಚ್ಚಾಗಿವೆ. ತಮನ್ನು ವಿರೋಧಿಸುತ್ತಿರುವ ಯತ್ನಾಳ್ ಬಣದಿಂದ ಚುನಾವಣೆಗೆ ಯಾವುದೇ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ವಿಜಯೇಂದ್ರ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯನ್ನು ಕಣಕ್ಕಿಳಿಸಲು ಯತ್ನಾಳ್ ಬಣ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ನಾಯಕರ ಬೆಂಬಲ ಸಹ ದೊರೆತಿದೆ ಎಂದು ಹೇಳಲಾಗುತ್ತಿದೆ. ಆದರೆ ವಿಜಯೇಂದ್ರ ವಿರುದ್ಧ ಕಣಕ್ಕಿಳಿಯಲು ಶೋಭಾ ಕರಂದ್ಲಾಜೆ ಸುತಾರಾಂ ಒಪ್ಪಿಲ್ಲ. ನನಗೆ ಕೇಂದ್ರದಲ್ಲೇ ಜವಾಬ್ದಾರಿಯುತ ಸ್ಥಾನ ಇರುವುದರಿಂದ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಸುತಾರಾಂ ಒಪ್ಪದೆ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಪಟ್ಟು ಬಿಡದ ಯತ್ನಾಳ್ ತಂಡ ಶೋಭಾ ಕರಂದ್ಲಾಜೆಯನ್ನು ವಿಜಯೇಂದ್ರ ವಿರುದ್ಧ ಕಣಕ್ಕಿಳಿಸಲು ಸರ್ವರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ. ಇದರ ಸುಳಿವು ಅರಿತ ರಾಜ್ಯಾಧ್ಯಕ್ಷರು ಅಂತಹ ಸಂದರ್ಭ ಬಂದರೆ ತಮ ಬೆಂಬಲಿಗರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ.