ಬೆಂಗಳೂರು,ಜೂ.13– ಈಗಲಾದರೂ ಬಿತ್ತನೆ ಬೀಜಗಳ ಬೆಲೆ ಈ ಹಿಂದಿನಂತೆ ನಿಗಧಿಪಡಿಸಿ ರಸಗೊಬ್ಬರಕ್ಕಾಗಿ ರೈತರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಜರೂರು ಕ್ರಮ ವಹಿಸಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಡಿನ ರೈತರ ಕುರಿತು ಕಿಂಚಿತ್ತೂ ಕಾಳಜಿ ತೋರದ ರಾಜ್ಯದ ಸರ್ಕಾರದಿಂದ ನಿತ್ಯವೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬರದಿಂದ ಕಂಗೆಟ್ಟಿದ್ದ ರೈತರಿಗೆ ಬರ ಪರಿಹಾರ ನೀಡದ ಈ ಸರ್ಕಾರ ಇದೀಗ ವರುಣನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಬಿತ್ತನೆ ಬೀಜಗಳ ಬೆಲೆ ಏರಿಸಿ ಅನ್ನದಾತರ ಮೇಲೆ ಬರೆ ಎಳೆದಿದ್ದಲ್ಲದೇ ಬಿತ್ತನೆಗೆ ಅಗತ್ಯವಿದ್ದ ರಸ ಗೊಬ್ಬರ ಸಂಗ್ರಹದಲ್ಲಿಯೂ ವಿಫಲವಾಗಿ ರೈತರಿಗೆ ಅಲೆದಾಟದ ಭಾಗ್ಯ ಕರುಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಈಗಲಾದರೂ ಬಿತ್ತನೆ ಬೀಜಗಳ ಬೆಲೆ ಈ ಹಿಂದಿನ ಬೆಲೆಯನ್ನೇ ನಿಗಧಿಪಡಿಸಿ ರಸಗೊಬ್ಬರಕ್ಕಾಗಿ ರೈತರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.