ಬೆಂಗಳೂರು,ನ.9- ಕಾಂಗ್ರೆಸ್ ಸರ್ಕಾರ ತೊಲಗುವವರೆಗೆ ಅಭಿವೃದ್ಧಿಯೂ ಇಲ್ಲ, ಜನರಿಗೆ ಸುರಕ್ಷತೆಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಸುರಕ್ಷಿತವಲ್ಲದ ಕರ್ನಾಟಕದಲ್ಲಿ ಸಭ್ಯ ನಾಗರೀಕರು, ಮುಗ್ಧ ಜನತೆ ಬದುಕುವುದು ಹೇಗೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ ತೊಲಗಲಿ, ಕರ್ನಾಟಕ ಉಳಿಯಲಿ ಎಂದು ಆಶಿಸಿದ್ದಾರೆ.
ಜೈಲುಗಳ ಕರ್ಮಕಾಂಡಕ್ಕೆ ಕೊನೆಯೇ ಇಲ್ಲದಂತಾಗಿದೆ.ಒಂದು ಕಡೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ, ಅತ್ಯಾಚಾರ, ಕೊಲೆ, ದರೋಡೆ ಪ್ರಕರಣಗಳು ಘಟಿಸುತ್ತಲೇ ಇದೆ.ಕ್ರಿಮಿನಲ್ ಚಟುವಟಿಕೆಗಳಿಗೆ ಅಂಕುಶ ಹಾಕುವ ಬದ್ಧತೆ ಈ ಸರ್ಕಾರಕ್ಕೆ ಇದ್ದಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು, ದೇಶದ್ರೋಹಿಗಳು ಕ್ರಿಮಿನಲ್ ಕೃತ್ಯಗಳನ್ನು ಎಸಗಲು ಯಾರಿಗೂ ಹೆದರುತ್ತಿಲ್ಲ, ಏಕೆಂದರೆ ಅಪರಾಧ ಎಸಗಿ ಬಂಧನವಾದರೆ ಜೈಲುಗಳಲ್ಲಿ ರಾಜಾತಿಥ್ಯ ಸಿಗುತ್ತದೆ ಎಂಬ ಖಾತ್ರಿ ಅವರಿಗಿದೆ. ಪರಪ್ಪನ ಅಗ್ರಹಾರದಲ್ಲಿ ದೇಶವಿದ್ರೋಹಿ ಉಗ್ರಗಾಮಿಗಳಿಗೆ, ರೇಪಿಸ್ಟ್, ಸಗ್ಲರ್ಸ್, ಕೊಲೆಗೆಡುಕರಿಗೆ ವಿಶೇಷ ಸವಲತ್ತು ದೊರೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಕ್ರಿಮಿನಲ್ ಗಳಿಗೆ, ಉಗ್ರರಿಗೆ ಸ್ವರ್ಗ ಎಂಬುದನ್ನು ಪರಪ್ಪನ ಅಗ್ರಹಾರದ ಜೈಲು ಸಾಕ್ಷೀಕರಿಸಿದೆ.ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನೈತಿಕತೆ ಇಲ್ಲದ ನಾಚಿಕೆಗೇಡಿತನದ ದುರಾಡಳಿತದ ಪ್ರತಿಫಲನ ಪರಪ್ಪನ ಅಗ್ರಹಾರದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ವಿಕೃತ ಕಾಮಿ ಉಮೇಶ್ ರೆಡ್ಡಿಯಂತವರಿಗೆ, ಉಗ್ರ ಸಂಘಟನೆ ಐಎಸ್ಐಎಸ್ ಉಗ್ರ ಮನಸ್ಥಿತಿಯ ಯುವಕರನ್ನು ನೇಮಕ ಮಾಡುತ್ತಿದ್ದ ಜುಹಾದ್ ಹಮೀದ್ ಶಕೀಲ್ ಮನ್ನಾನಿಗೆ ಸಕಲ ಸವಲತ್ತು ನೀಡಿ, ಐಷಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ಕ್ರಮ. ಇದು ಜೈಲು ವ್ಯವಸ್ಥೆ ಹಾಗೂ ಅಧಿಕಾರಿಗಳ ದೇಶದ್ರೋಹದ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಾಷ್ಟ್ರೀಯ ತನಿಖಾ ದಳ ಇದಕ್ಕೆ ಕಾರಣರಾದ ಜೈಲು ಸಿಬ್ಬಂದಿ, ಅಧಿಕಾರಿಗಳನ್ನು ಬಂಧಿಸಿ ದೇಶ ದ್ರೋಹಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಿ ಎಂದು ಒತ್ತಾಯಿಸುವೆ. ಆತಗೌರವ ಇದ್ದರೆ ಗೃಹಸಚಿವರು ಈ ಕೂಡಲೇ ರಾಜಿನಾಮೆ ನೀಡಲಿ, ಬದ್ಧತೆ ನೈತಿಕತೆ ಇದ್ದರೆ ಮುಖ್ಯಮಂತ್ರಿಗಳು ನೈತಿಕ ಜವಾಬ್ದಾರಿ ಹೊರಲಿ, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ದಾವೆ ಹೂಡಲಿ ಎಂದು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
