Thursday, November 14, 2024
Homeರಾಜ್ಯಮಿನಿ ಸಮರಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ, 3 ಕ್ಷೇತ್ರಗಳಲ್ಲಿ ನಾಳೆ ಮತದಾನ

ಮಿನಿ ಸಮರಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ, 3 ಕ್ಷೇತ್ರಗಳಲ್ಲಿ ನಾಳೆ ಮತದಾನ

Byelection voting tomorrow in 3 constituencies

ಬೆಂಗಳೂರು,ನ.12- ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಿನಿ ಮಹಾಸಮರ ಎಂದೇ ಹೇಳಲಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದೆ. ಮೂರು ಕ್ಷೇತ್ರಗಳಿಗೆ ಜಿಲ್ಲಾ ಕೇಂದ್ರಗಳಿಂದ ಚುನಾವಣಾಧಿಕಾರಿಗಳು, ಇವಿಎಂ ಸೇರಿದಂತೆ ಮತ್ತಿತರ ಸಾಮಗ್ರಿಗಳೊಂದಿಗೆ ತಮಗೆ ನಿಗದಿಪಡಿಸಿದ ಮತಗಟ್ಟೆಗೆ ಇಂದೇ ತೆರಳಿದ್ದಾರೆ.

ಗಣಿ ಜಿಲ್ಲೆ ಸಂಡೂರು ಮೀಸಲು ಕ್ಷೇತ್ರದಲ್ಲಿ ಅತಿ ಕಡಿಮೆ 6, ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ 8 ಹಾಗೂ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಅತಿಹೆಚ್ಚು 31 ಪಕ್ಷೇತರರು ಸೇರಿದಂತೆ ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾರದರ್ಶಕ ಹಾಗೂ ನ್ಯಾಯಸಮತ ಮತದಾನಕ್ಕೆ
ಆಯೋಗ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದು, ಮತದಾನ ನಡೆಯುವ ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳಿದ್ದಾರೆ. ಇಂದು ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು.

ಜಿದ್ದಾಜಿದ್ದಿನ ಸ್ಪರ್ಧೆ:
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲವೇ ಎನ್ಡಿಎ ಗೆದ್ದರೆ ಸರ್ಕಾರದ ಮೇಲೆ ನೇರವಾಗಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಆಡಳಿತಾರೂಢ ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಗೆದ್ದು ರಾಜ್ಯದ ಮತದಾರರು ತಮ ಸರ್ಕಾರದ ಪರವಾಗಿ ಇದ್ದಾರೆಂಬುದನ್ನು ಬಿಂಬಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ.ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ಹಾಗೂ ಶಾಸಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ನಡೆಸಿದ್ದಾರೆ.

ಇನ್ನು ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಮುಖಭಂಗ ಉಂಟು ಮಾಡಲು ಬಿಜೆಪಿ-ಜೆಡಿಎಸ್ ನಾಯಕರು ಸೇರಿಗೆ ಸವ್ವಾಸೇರು ಎಂಬಂತೆ ಪ್ರಚಾರ ನಡೆಸಿದ್ದಾರೆ. ಹಲವು ಗೊಂದಲಗಳ ನಡುವೆಯೇ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಸರಿಸಾಟಿ ಎಂಬಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮಾಯಿ ಸೇರಿದಂತೆ ಉಭಯ ಪಕ್ಷಗಳ ಮುಖಂಡರು ಹಳೆಯ ವೈರತ್ವವನ್ನು ಮರೆತು ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.

ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಚನ್ನಪಟ್ಟಣದಂತೆ ಸಂಡೂರು ಕೂಡ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿದೆ. ಕಾಂಗ್ರೆಸ್ನ ಭದ್ರಕೋಟೆ ಎನಿಸಿದ ಈ ಮೀಸಲು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಬಿಜೆಪಿ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.

ರಾಜಕೀಯ ಚಾಣಾಕ್ಷತೆಗೆ ಹೆಸರುವಾಸಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕ್ಷೇತ್ರದ ಉಸ್ತುವಾರಿಯಾಗಿ ಚಿತ್ರಣವನ್ನೇ ಬದಲಾಯಿಸಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅಭ್ಯರ್ಥಿಯಾಗಿದ್ದು, ಶತಾಯ ಗತಾಯ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಸಚಿವ ಸಂತೋಷ್ ಲಾಡ್ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಬೊಮಾಯಿ ತಮ ಪುತ್ರ ಭರತ್ ಬೊಮಾಯಿಯನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.
ಕಾಂಗ್ರೆಸ್ ಪಠಾಣ್ ಯಾಸೀರ್ಗೆ ಟಿಕೆಟ್ ನೀಡಿದ್ದು, ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದು ನ.23ರ ಫಲಿತಾಂಶದಲ್ಲಿ ಬಹಿರಂಗಗೊಳ್ಳಲಿದೆ.

ಮೂರು ಕ್ಷೇತ್ರದಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ-1 (ಪ) ಸಿಆಸು ಇಲಾಖೆ (ರಾಜ್ಯ ಶಿಷ್ಟಾಚಾರ) ಅಧಿಸೂಚನೆ ಹೊರಡಿಸಿದ್ದಾರೆ.

ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು, ಜೀವವಿಮಾ ನಿಗಮ, ಹಣಕಾಸು ಸಂಸ್ಥೆಗಳು ಇನ್ನಿತರೇ ಔದ್ಯಮಿಕ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅರ್ಹ ಮತದಾರರಿಗೆ ಸೀಮಿತವಾದಂತೆ ಹಾಗೂ ಮತದಾನ ಮಾಡಲು ಅನುಕೂಲವಾಗುವಂತೆ 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳನ್ವಯ ಒಂದು ದಿನದ ವೇತನ ಸಹಿತ ರಜೆ ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಮಂಜೂರು ಮಾಡತಕ್ಕದ್ದು ಎಂಬ ಷರತ್ತಿಗೊಳಪಟ್ಟು ಒಂದು ದಿನದ ವೇತನ ಸಹಿತ ರಜೆಯನ್ನು ನೀಡಲು ಆದೇಶಿಸಿದೆ ಎಂದು ಹೇಳಿದೆ.

ಚನ್ನಪಟ್ಟಣ
ಒಟ್ಟು ಅಭ್ಯರ್ಥಿಗಳು 31
ಜೆಡಿಎಸ್- ನಿಖಿಲ್ಕುಮಾರಸ್ವಾಮಿ
ಕಾಂಗ್ರೆಸ್- ಸಿ.ಪಿ.ಯೋಗೇಶ್ವರ್
ಒಟ್ಟು ಮತದಾರರು 2,36,836
ಪುರುಷರು – 1,12,271
ಮಹಿಳೆಯರು- 1,20,557

ಶಿಗ್ಗಾವಿ
ಒಟ್ಟು ಅಭ್ಯರ್ಥಿಗಳು 8
ಬಿಜೆಪಿ- ಭರತ್ ಬೊಮಾಯಿ
ಕಾಂಗ್ರೆಸ್- ಪಠಾಣ್ ಯಾಸೀರ್ ಅಹಮದ್ ಖಾನ್
ಒಟ್ಟು ಮತದಾರರು 2,36,790
ಪುರುಷರು – 1,21,067
ಮಹಿಳೆಯರು- 1,15,717

ಸಂಡೂರು
ಒಟ್ಟು ಅಭ್ಯರ್ಥಿಗಳು 6
ಬಿಜೆಪಿ – ಬಂಗಾರು ಹನುಮಂತ
ಕಾಂಗ್ರೆಸ್- ಇ. ಅನ್ನಪೂರ್ಣ
ಒಟ್ಟು ಮತದಾರರು -2,36,047
ಪುರುಷರು – 1,17,739
ಮಹಿಳೆಯರು- 1,18,279

ಮತದಾನದ ಸಮಯ: ಬೆಳಗ್ಗೆ 7ರಿಂದ ಸಂಜೆ 6
ಮತದಾನಕ್ಕೆ ಬೇಕಾದ ದಾಖಲೆಗಳು:
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ರೇಷನ್ಕಾಡ್
ಪಾನ್ ಕಾರ್ಡ್
ಚಾಲನಾ ಪತ್ರ
ಬ್ಯಾಂಕ್ ಪಾಸ್ಬುಕ್
ಪಾಸ್ಪೋರ್ಟ್

RELATED ARTICLES

Latest News