ಮಂಗಳೂರು,ಆ.17- ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಪ್ರಚಾರ ನಡೆಸುತ್ತಿರುವವರ ಮೇಲೆಯೂ ರಾಜ್ಯಸರ್ಕಾರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.ಶ್ರೀಕ್ಷೇತ್ರದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿ ನಡೆಸಿದೆ ಎಂಬ ಭಾವನೆ ಭಕ್ತರಲ್ಲಿ ಮೂಡಿದೆ. ಈ ಸಂಶಯ ಹೋಗಬೇಕಾದರೆ ತನಿಖೆಗೆ ಸರ್ಕಾರ ಆದೇಶ ನೀಡಬೇಕೆಂದು ಆಗ್ರಹಿಸಿದರು.
ಯಾವ ಉದ್ದೇಶಕ್ಕಾಗಿ ಈ ಪಿತೂರಿಯನ್ನು ನಡೆಸಲಾಗಿದೆ?, ಇದರ ಹಿಂದಿರುವ ದುಷ್ಟಶಕ್ತಿಗಳ ಕೈವಾಡ ಯಾವುದೆಂಬುದು ಜನತೆಗೆ ಗೊತ್ತಾಗಬೇಕು. ಹೀಗಾಗಿ ಸರ್ಕಾರ ತನಿಖೆಗೆ ವಹಿಸಲಿ ಎಂದು ಮನವಿ ಮಾಡಿದರು.ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ; ಶ್ರೀ ಕ್ಷೇತ್ರ ಧರ್ಮಸ್ಥಳ, ದೇವರು, ಅಣ್ಣಪ್ಪ ಸ್ವಾಮಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅಸಂಖ್ಯಾತ ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಷಡ್ಯಂತ್ರವೂ ನಡೆದಿದೆ ಎಂದು ತಿಳಿಸಿದರು.
ಎಡಪಂಥೀಯರ ಗುಂಪುಗಳ ಒತ್ತಡಕ್ಕೆ ಮಣಿದು ಎಸ್ಐಟಿ ರಚಿಸಿದ್ದಾರೆ ಎಂಬ ಮಾಹಿತಿಯನ್ನು ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ ಎಂದು ಮಾಧ್ಯಮಗಳ ಗಮನಕ್ಕೆ ತಂದರು.
ಧರ್ಮಸ್ಥಳದ ಬಗ್ಗೆ ಇನ್ನೆಷ್ಟು ಅಪಪ್ರಚಾರ ನಡೆಯಬೇಕು ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು. ಈ ಅಪಪ್ರಚಾರದ ಹಿಂದಿನ ಶಕ್ತಿಗಳ ಕುರಿತು ಸರಕಾರ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಾನೂ ಧರ್ಮಸ್ಥಳ ಮಂಜುನಾಥೇಶ್ವರನ ಪರಮ ಭಕ್ತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೊನ್ನೆ ಸದನದಲ್ಲೂ ಹೇಳಿದ್ದಾರೆ. ಅವರು ನಿಜಕ್ಕೂ ಪರಮ ಭಕ್ತನಾಗಿದ್ದರೆ ತಡ ಮಾಡದೇ ಪಿತೂರಿ, ಷಡ್ಯಂತ್ರದ ಹಿಂದೆ ಇರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ಡಿಸಿಎಂ, ಷಡ್ಯಂತ್ರವನ್ನು ಬಹಿರಂಗಪಡಿಸಬೇಕು. ನಿಷ್ಪಕ್ಷಪಾತ- ಪಾರದರ್ಶಕ ತನಿಖೆಗೆ ಬಿಜೆಪಿ ಒತ್ತಾಯಿಸಿತ್ತು. ಬಿಜೆಪಿ ರಾಜಕಾರಣ ಮಾಡಿದ್ದರೆ ಇಷ್ಟು ದಿನ ಕಾಯುವ ಅವಶ್ಯಕತೆ ಇರಲಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಇವತ್ತು ಕೋಟ್ಯಂತರ ಭಕ್ತರು ನೋವಿನಲ್ಲಿದ್ದಾರೆ ಎಂದು ತಿಳಿಸಿದರು.
ಷಡ್ಯಂತ್ರ ಎಂದಿರುವ ಉಪ ಮುಖ್ಯಮಂತ್ರಿಗಳು ಆ ಷಡ್ಯಂತ್ರವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಇದರ ಹಿಂದೆ ಎಡಪಂಥೀಯ ಸಂಘಟನೆಗಳಿರುವ ಕುರಿತು ಸ್ವತಃ ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಇದೆಲ್ಲವುಗಳ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ತನಿಖೆ ಕುರಿತು ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರ ಮಂಡಿಸಬೇಕೆಂದು ಸದನದಲ್ಲೂ ಆಗ್ರಹಿಸಿದ್ದೇವೆ ಎಂದು ಗಮನ ಸೆಳೆದರು. ಹುಚ್ಚಾಟ ನಿಲ್ಲಿಸಿ ಎಂದು ಅವರು ಒತ್ತಾಯಿಸಿದರು.
ಅಪಪ್ರಚಾರದಿಂದ ನೊಂದಿರುವ ಧರ್ಮಾಧಿಕಾರಿಗಳು :
ತನಿಖೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನೊಂದಿರುವುದು ಗೊತ್ತಾಗುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಹಿಂದೂ ಧರ್ಮ, ಪರಂಪರೆ, ಸಂಸ್ಕತಿಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಶ್ರೀ ಕ್ಷೇತ್ರದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಬರಬಾರದು ಎಂಬುದೇ ನಮೆಲ್ಲರ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ