Saturday, December 21, 2024
Homeರಾಜ್ಯಬಿಜೆಪಿಯನ್ನು ಒಗ್ಗೂಡಿಸಿದ ಸಿ.ಟಿ.ರವಿ ಪ್ರಕರಣ, ಬಣ ರಾಜಕೀಯಕ್ಕೆ ತಾತ್ಕಾಲಿಕ ಬ್ರೇಕ್

ಬಿಜೆಪಿಯನ್ನು ಒಗ್ಗೂಡಿಸಿದ ಸಿ.ಟಿ.ರವಿ ಪ್ರಕರಣ, ಬಣ ರಾಜಕೀಯಕ್ಕೆ ತಾತ್ಕಾಲಿಕ ಬ್ರೇಕ್

C.T. Ravi case unites BJP

ಬೆಂಗಳೂರು,ಡಿ.21- ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಪ್ರಯೋಗಿಸಿದ ಹಿನ್ನಲೆಯಲ್ಲಿ ಬಂಧನಕ್ಕೊಳಪಟ್ಟಿದ್ದ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶಿಸಿ ಬಣ ರಾಜಕೀಯಕ್ಕೆ ತಾತ್ಕಾಲಿಕ ವಿರಾಮ ನೀಡಿದೆ. ಕೆಲವೇ ದಿನಗಳ ಹಿಂದಷ್ಟೇ ಮನೆಯೊಂದು ಮೂರು ಬಾಗಿಲು ಎಂಬ ಸ್ಥಿತಿಯಲ್ಲಿದ್ದ ಬಿಜೆಪಿಯಲ್ಲಿ ಸಿ.ಟಿ.ರವಿ ಪ್ರಕರಣ ಎಲ್ಲವನ್ನೂ ಮರೆಸಿ ಒಗ್ಗಟ್ಟಿನ ಬೆಂಬಲ ವ್ಯಕ್ತವಾಗಿರುವುದು ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ.

ರವಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ ಪಕ್ಷದ ಹಿರಿಯ ಮತ್ತು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಪ್ರಕರಣದಲ್ಲಿ ನಾವು ಒಗ್ಗಟ್ಟು ಪ್ರದರ್ಶಿಸದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮನಗಂಡರು.

ಹೀಗಾಗಿಯೇ ಗುರುವಾರ ಸಂಜೆ 6.30ಕ್ಕೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸುತ್ತಿದ್ದಂತೆ ತಕ್ಷಣವೇ ಎಚ್ಚೆತ್ತುಕೊಂಡ ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಉಪನಾಯಕ ಅರವಿಂದ್‌ ಬೆಲ್ಲದ್‌, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯರಾದ ಕೇಶವಪ್ರಸಾದ್‌ ಸೇರಿದಂತೆ ಪಕ್ಷದ ಮುಖಂಡರ ಜೊತೆ ಚರ್ಚಿಸಿ ರವಿ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಅವರ ಜೊತೆ ಇರುವಂತೆ ಸಲಹೆ ನೀಡಿದರು.

ರವಿ ಅವರನ್ನು ಬಂಧಿಸಿ ಪೊಲೀಸ್‌‍ ಜೀಪ್‌ನಲ್ಲಿ ಕರೆದೊಯ್ಯುತ್ತಿದ್ದಂತೆ ಅವರನ್ನೇ ಹಿಂಬಾಲಿಸಿದ ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಬೆಲ್ಲದ್‌ ಖಾನಾಪುರ ಠಾಣೆಗೆ ತೆರಳಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ದೂರು ಸಲ್ಲಿಸಿದರು.

ಶುಕ್ರವಾರ ಬೆಳಗ್ಗೆ ಪೊಲೀಸರು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತರುವುದು ಗೊತ್ತಾಗುತ್ತಿದ್ದಂತೆ ಮುಂಜಾನೆಯೇ ನಗರಕ್ಕೆ ಆಗಮಿಸಿದ ವಿಜಯೇಂದ್ರ ಮತ್ತಿತರರು ಆ ವೇಳೆಗಾಗಲೇ ನ್ಯಾಯಾಲಯದಲ್ಲಿ ವಾದ ಮಂಡಿಸಲು ವಕೀಲರನ್ನು ನೇಮಿಸಿದ್ದರು.ಸ್ವತಃ ನ್ಯಾಯಾಲಯದಲ್ಲಿ ವಾದ-ವಿವಾದ ನಡೆಯುವಾಗ ವಿಜಯೇಂದ್ರ, ಅಶೋಕ್‌ ತಮ ಕಕ್ಷಿದಾರನಿಗೆ ಜಾಮೀನು ಸಿಗುತ್ತದೆಯೇ ಎಂಬುದನ್ನು ಅಲ್ಲಿಯೇ ಕುಳಿತು ವೀಕ್ಷಣೆ ಮಾಡುತ್ತಿದ್ದರು.

ನಂತರ ನ್ಯಾಯಾಲಯ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸುತ್ತಿದ್ದಂತೆ ತಮ ಕಾರ್ಯಕರ್ತರು ಮತ್ತು ಸ್ವತಃ ಪಕ್ಷದ ಮುಖಂಡರೇ ರವಿ ಅವರಿಗೆ ರಸ್ತೆ ಮಾರ್ಗದಲ್ಲೇ ಬರುವ ಮೂಲಕ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸಿದರು.ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ ಹೀಗೆ ಜಿಲ್ಲಾ ಕೇಂದ್ರಗಳಿಗೆ ಬರುತ್ತಿದ್ದಂತೆ ತಮ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿ ರವಿ ಅವರಿಗೆ ಬೆಂಬಲ ಸೂಚಿಸಬೇಕೆಂದು ನಿರ್ದೇಶನ ನೀಡಿದ್ದರು.

ಸಂಜೆ ಹೈಕೋರ್ಟ್‌ ಷರತ್ತುಬದ್ದ ಜಾಮೀನು ನೀಡುತ್ತಿದ್ದಂತೆ ದಾವಣಗೆರೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ನಂತರ ಬೆಂಗಳೂರಿಗೆ ಬರುತ್ತಿದ್ದಂತೆ ಸಿ.ಟಿ.ರವಿಗೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತವೂ ದೊರೆಯಿತು. ಹೀಗೆ ಪ್ರತಿ ಹಂತದಲ್ಲೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಬಿಜೆಪಿ ಹಿಂದೆಮುಂದೆ ಬೀಳಲಿಲ್ಲ. ನಾನೊಂದು ತೀರ, ನೀನೊಂದು ತೀರ ಎಂಬಂತೆ ಇದ್ದ ಬಿಜೆಪಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರಕರಣವು ದೂರವಾಗಿದ್ದ ಕಮಲ ನಾಯಕರ ಮನಸ್ಸನ್ನು ಒಂದು ಮಾಡಿರುವುದಂತೂ ಸುಳ್ಳಲ್ಲ.

RELATED ARTICLES

Latest News