ಬೆಂಗಳೂರು,ಅ.13- ನಾವು ಆರ್ಎಸ್ಎಸ್ ಅಜೆಂಡಾ ಇಟ್ಟುಕೊಂಡೇ ಜನರ ಬಳಿ ಹೋಗುತ್ತೇವೆ. ಒಂದು ವೇಳೆ ಕಾಂಗ್ರೆಸ್ನವರು ಇದನ್ನು ವಿರೋಧಿಸುವುದಾದರೆ ವಿಧಾನಸಭೆ ವಿಸರ್ಜಿಸಿ ಜನರ ಬಳಿ ಬನ್ನಿ ನೋಡೋಣ. ಯಾರು ಗೆಲ್ಲುತ್ತಾರೆ ನೋಡಿಯೇ ಬಿಡೋಣ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಹಿರಂಗ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಆರ್ಎಸ್ಎಸ್ ಬೆಂಬಲಿತ ಚಟುವಟಿಕೆಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಬಂಧ ಹಾಕಬೇಕೆಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಸಂಘ ಪರಿವಾರದ ಅಜೆಂಡಾಗಳನ್ನೇ ಮುಂದಿಟ್ಟುಕೊಂಡು ಬರುತ್ತೇವೆ.
ನೀವು ವಿರೋಧಿಸುವುದಾದರೆ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯಕ್ಕೆ ಬನ್ನಿ. ಜನಾದೇಶ ಯಾರಿಗೆ ಸಿಗುತ್ತದೆ ನೋಡೋಣ ಎಂದು ಸವಾಲು ಎಸೆದರು.ಕರ್ನಾಟಕದಲ್ಲಿ ಇನ್ನೆಂದಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಜನ ನಿಮನ್ನು ಗೆಲ್ಲಿಸಿ ಪರಿತಪಿಸುತ್ತಿದ್ದಾರೆ. ನಿಮ ಗೆಲುವು ಕೂಡ ಇದೇ ಕೊನೆ. ಸಾಮನ್ಯ ಕಾರ್ಯಕರ್ತರನ್ನು ಕಬಳಿಸಿ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದೀರಿ ಎಂದು ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದುಸಂಘದ ಚಟುವಟಿಕೆ ನಿರ್ಬಂಧ ಹಾಕಬೇಕೆಂದು ಕೋರಿದ್ದಾರೆ. ನಾನು ಅವರನ್ನು ಸಾರ್ವಜನಿಕ ಚರ್ಚೆಗೆ ಆಹ್ವಾನಿಸುತ್ತೇನೆ ಬನ್ನಿ ಎಂದು ಪಂಥಾಹ್ವಾನ ನೀಡಿದರು.
ಆರ್ಎಸ್ಎಸ್ ನೂರು ವರ್ಷದ ಇತಿಹಾಸದಲ್ಲಿ ಭಯೋತ್ಪಾದನೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಆದರೆ ಪ್ರಕೋಪ, ವಿಕೋಪ ಸಮಸ್ಯೆಗಳ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ನೂರಾರು ಉದಾಹರಣೆಗಳಿವೆ. ಆರ್ಎಸ್ಎಸ್ ಪ್ರೇರಣೆ ಪಡೆದು ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ ಎಂದು ಸಮರ್ಥಿಸಿಕೊಂಡರು.
ಸಮಾಜಕ್ಕೆ ತನ್ನದೇ ಆದ ಸಕಾರಾತಕ ಕೊಡುಗೆಯನ್ನು ಆರ್ಎಸ್ಎಸ್ ಕೊಟ್ಟಿದೆ. ಇಂಥ ಸಂಘವನ್ನು ನಕಾರಾತಕವಾಗಿ ಬಿಂಬಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಪ್ರಿಯಾಂಕ್ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ. ಅದರ ಅಹಂನಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ, ಭ್ರಷ್ಟಾಚಾರದ ಪಿತಾಮಹರೇ ಕಾಂಗ್ರೆಸ್ನಲ್ಲಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಕೊಟ್ಟ, ಭಯೋತ್ಪಾದಕರನ್ನು ಬೆಳೆಸಿದ ಪಕ್ಷ ಕಾಂಗ್ರೆಸ್. ಅಂಥ ಕಾಂಗ್ರೆಸ್ ನಲ್ಲಿರುವ ನೀವು ಸಂಘದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪಾಕ್ ಪರ ಘೋಷಣೆ, ಗೋಹತ್ಯೆ, ಗೋಭಕ್ಷಣೆಗೆ ಕುಮಕ್ಕು ಕೊಡುವವರನ್ನು ಬೆಂಬಲಿಸುವ ನೀಚತನ ನಿಮ ಪಕ್ಷಕ್ಕಿದೆ. ಗಾಂಧಿಯವರ ಹತ್ಯೆಗೂ ಸಂಘಕ್ಕೂ ಸಂಬಂಧ ಇಲ್ಲ ಎಂದು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರೇನೇಮಿಸಿದ ಸಮಿತಿಗಳೇ ಹೇಳಿವೆ. ಆದರೂ ಮತ್ತೆ ಮತ್ತೆ ಗಾಂಧಿ ಹತ್ಯೆ ಮಾಡಿದ್ದು ಆರ್ಎಸ್ಎಸ್ ಎಂದು ಸುಳ್ಳು ಹೇಳುತ್ತಿದ್ದೀರಿ. ಸರ್ವಾಧಿಕಾರಿ ಮನಸ್ಥಿತಿ ಅಂದಿದ್ದೀರಿ, ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ನಿಮ ಪಕ್ಷಕ್ಕಿದೆ. ಸರ್ವಾಧಿಕಾರಿ ಎನ್ನುವುದು ನಿಮ ಪಕ್ಷಕ್ಕೆ ಅನ್ವಯ ಎಂದು ಗುಡುಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಚಿವರಿಗೆ ಔತಣಕೂಟ ಏರ್ಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಜನರು ಸಂಕಷ್ಟದಲ್ಲಿದ್ದಾಗ ಸಚಿವರ ಔತಣಕೂಟ ಇಟ್ಟುಕೊಳ್ಳುವುದಿಲ್ಲ. ಸಂವೇದನೆ ಇರುವವರು ಇಂತಹ ಔತಣಕೂಟ ನಡೆಸುವುದಿಲ್ಲ. ಸಿಎಂಗೆ ಸಂವೇದನೆ ಇದೆಯಾ? ಎಂದು ಪ್ರಶ್ನಿಸಿದರು.
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹೆಲಿಕಾಪ್ಟರ್ ಸಮೀಕ್ಷೆ ಮಾಡಿ ಸಿಎಂ, ಕೆಳಗಿಳಿದು ರೈತರ ಕಷ್ಟ ಕೇಳಲಿಲ್ಲ. ಮೇಲಷ್ಟೇ ಹಾರಾಟ ಮಾಡಿದರು ಎಂದು ದೂರಿದರು.
ವಿಧಾನಪರಿಷತ್ ಸದಸ್ಯಬಿ.ಕೆ.ಹರಿಪ್ರಸಾದ್ ಅವರು ಆರೆಎಸ್ಎಸ್ ನೋಂದಣಿ ಆಗಿಲ್ಲ ಎಂಬ ವಿಚಾರಕ್ಕೆ, ಹೀಗೆಲ್ಲ ಮಾತಾಡಿದರೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕೆ ಮಾತಾಡಿರಬಹುದು. ಅಧಿಕಾರ ಪಡೆದುಕೊಳ್ಳಲು ಹರಿಪ್ರಸಾದ್ ಹೀಗೆ ಮಾತಾಡಿದ್ದಾರೆ ಎಂದು ಟೀಕಿಸಿದರು.