Saturday, July 26, 2025
Homeರಾಜ್ಯಬಿಲ್ಡರ್ಸಗಳಿಂದ "ಬೆಂಕಿ" ಸೆಸ್‌‍ ವಸೂಲಿ ಮಾಡುವ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ

ಬಿಲ್ಡರ್ಸಗಳಿಂದ “ಬೆಂಕಿ” ಸೆಸ್‌‍ ವಸೂಲಿ ಮಾಡುವ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ

Cabinet approves bill to collect "fire" cess from builders

ಬೆಂಗಳೂರು,ಜು.24– ಬಿಲ್ಡರ್ಸಗಳಿಂದ ಶೇ.1 ರಷ್ಟು ಸೆಸ್‌‍ ಸಂಗ್ರಹಿಸುವ ಕರ್ನಾಟಕ ಅಗ್ನಿಶಾಮಕ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯಿದೆಯ ವ್ಯಾಪ್ತಿಗೆ ಒಳಪಡುವ ಬಿಲ್ಡರ್ಸ್ ಆಸ್ಪತ್ರೆ, ಎತ್ತರದ ಕಟ್ಟಡಗಳು, ಕೈಗಾರಿಕಾ ನಿರ್ಮಾಣಗಳಿಂದ ಆಸ್ತಿ ತೆರಿಗೆಯೊಂದಿಗೆ ಸೆಸ್‌‍ ಸಂಗ್ರಹಿಸಲಾಗುವುದು ಎಂದರು.

ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ 2024-2029ಕ್ಕೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ನೀತಿ ದಾಖಲೆಗಳಲ್ಲಿ ಸ್ಪಷ್ಟತೆ ಹಾಗೂ ನಿಖರತೆ ತರಲು ಈ ತಿದ್ದುಪಡಿ ತರಲಾಗುತ್ತಿದೆ. ಭಾಷೆ ಮತ್ತು ವಿವರಣೆಗೆ ಸೀಮಿತವಾಗಿರುವ ಬದಲಾವಣೆಗಳನ್ನು ಪರಿಷ್ಕರಿಸಿ ನಿಖರತೆ ತರುವ ನೀತಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ರಾಯಚೂರಿನ ರಾಜೀವ್‌ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪೆರಿಪೆರಲ್‌ ಕ್ಯಾನ್ಸರ್‌ ಚಿಕಿತ್ಸಾ ಘಟಕ ಸ್ಥಾಪಿಸಲಾಗುತ್ತದೆ. ಇದರಿಂದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. 20 ಕೋಟಿ ರೂ.ಗಳಲ್ಲಿ ಸಿವಿಲ್‌ ಕಾಮಗಾರಿ, 30 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಅಗತ್ಯ ಇರುವ ಹೆಚ್ಚುವರಿ ವೈದ್ಯಕೀಯ ಉಪಕರಣ, ಪೀಠೋಪಕರಣಗಳ ಖರೀದಿಗೆ 62 ಕೋಟಿ ರೂ. ವೆಚ್ಚದ ಆಡಳಿತಾತಕ ಅನುಮೋದನೆ ನೀಡಲಾಗಿದೆ ಎಂದರು.ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುವುದಾಗಿ ತಿಳಿಸಿದರು.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ 7 ವಿವಿಧ ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಸಂಬಂಧಿಸಿದ ತಿದ್ದುಪಡಿ ಅಧಿನಿಯಮಗಳನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ, ಕಾಗಿನೆಲೆ, ಕೂಡಲಸಂಗಮ, ಬನವಾಸಿ, ಸರ್ವಜ್ಞ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ 7 ಪ್ರಾಧಿಕಾರಗಳ ಕಾರ್ಯಭಾರ ನಿರ್ವಹಣೆಗೆ ಕಂದಾಯ ಸಚಿವರಿಗೆ ಅಧಿಕಾರ ನೀಡಲಾಗುತ್ತಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯರಗಟ್ಟಿ ಏತನೀರಾವರಿ ಯೋಜನೆಗೆ 25 ಕೋಟಿ ರೂ., ರೇಣುಕಾ ಏತನೀರಾವರಿ ಯೋಜನೆಗೆ 20 ಕೋಟಿ ರೂ.ಗಳನ್ನು ನವೀಕರಣ ಕಾಮಗಾರಿಗೆ ಖರ್ಚು ಮಾಡಲು ಅನುಮತಿಸಲಾಗಿದೆ ಎಂದರು.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂಧ ಗ್ರಾಮದಲ್ಲಿ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ತುಂಗಭದ್ರ ಎಡದಂಡೆ ಕಾಲುವೆಯ ಡಿ 32 ಮತ್ತು ಡಿ 36 ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಗಳಿಗೆ 178 ಕೊಟಿ ರೂ. ಅಂದಾಜು ಮೊತ್ತದಲ್ಲಿ ಸಾಲಗುಂದ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಬಳಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಮತ್ತು ಬ್ಯಾರೇಜ್‌ ನಿರ್ಮಿಸಲು 28 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ ಎಂದರು.ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ 0.512 ಟಿಎಂಸಿ ನೀರನ್ನು ಸಂಗ್ರಹಣಾ ಸ್ಥಳಕ್ಕೆ ಪೂರೈಸಲು ಅರಸೀಕೆರೆ ತಾಲ್ಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ 148.80 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2025 ಹಾಗೂ ಕರ್ನಾಟಕ ವೈದ್ಯಕೀಯ ನೋಂದಣಿ ವಿಧೇಯಕ-2025 ಅನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ತಿಳಿಸಿದರು.ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧಗಳು, ಉಪಭೋಗ್ಯ ವಸ್ತುಗಳು ಮತ್ತು ರಾಸಾಯನಿಕಗಳನ್ನು 880 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ ಎಂದರು. ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿಯವರ ಒತ್ತಾಸೆಯ ಮೇರೆಗೆ ಕರ್ನಾಟಕ ಫ್ಲಾಟ್‌ಫಾರಂ ಆಧಾರಿತ ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ವಿಧೇಯಕಕ್ಕೆ ಅನುಮೋದನೆ ನೀಡಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲೀಪುರ ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಸೇರಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆ ಜೀರ್ಣೋದ್ಧಾರ ಕಾಮಗಾರಿಗೆ 34 ಕೋಟಿ ರೂ., ಸೂಳೆಕೆರೆಯ ಉತ್ತರ ನಾಲೆಗಳ ಅಭಿವೃದ್ಧಿಗೆ 47.75 ಕೋಟಿ ರೂ., ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕು ಮದಗ-ಮಸೂರು ಕೆರೆಯ ಎಡದಂಡೆ-ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣಕ್ಕೆ 52 ಕೋಟಿ ರೂ., ಹಾಸನ ಜಿಲ್ಲೆಯ ಮದ್ದನಹಳ್ಳಿ ಬಳಿಯ ಹಾರಂಗಿ ಎಡದಂಡೆ ಕಾಲುವೆಯ ನಾಗಮಂಗಲ ಶಾಖಾ ಕಾಲುವೆಯಿಂದ ನೀರನ್ನೆತ್ತಿ ಡಿ.ತುಮಕೂರು ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಹೋಬಳಿಯ 18 ಕೆರೆಗಳನ್ನು ತುಂಬಿಸುವ 74 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES

Latest News