Thursday, September 4, 2025
Homeರಾಜಕೀಯ | Politicsಮುಡಾ ಹಗರಣ, ಕಮಿಷನ್‌ ದಂಧೆ ಕುರಿತು ಸಂಪುಟದಲ್ಲಿ ಚರ್ಚೆ

ಮುಡಾ ಹಗರಣ, ಕಮಿಷನ್‌ ದಂಧೆ ಕುರಿತು ಸಂಪುಟದಲ್ಲಿ ಚರ್ಚೆ

ಬೆಂಗಳೂರು, ಸೆ.4- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ಹಗರಣ, ಬಿಬಿಎಂಪಿ ಕಮಿಷನ್‌ ಭ್ರಷ್ಟಾಚಾರ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಚರ್ಚೆಯಾಗಿವೆ. ರಾಜ್ಯದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗಿರುವ 62 ಕ್ರಿಮಿನಲ್‌ ಮೊಕದ್ದಮೆ ಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ರೈತರು, ಕನ್ನಡಪರ ಸಂಘಟನೆಗಳು ಸೇರಿದಂತೆ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣಗಳನ್ನು ಕೈಬಿಡುವ ಕುರಿತಂತೆ ಸಮಾಲೋಚನೆ ನಡೆಸಲಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳ ಅವ್ಯವಹಾರ, ಭ್ರಷ್ಟಾಚಾರದ ಆರೋಪಗಳ ಕುರಿತು ನ್ಯಾಯಮೂರ್ತಿ ಹೆಚ್‌.ಎನ್‌. ನಾಗಮೋಹನ್‌ ದಾಸ್‌‍ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿಂದು ಮಂಡಿಸಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗವು ನೀಡಿರುವ ವರದಿಯ ಬಗ್ಗೆಯೂ ಚರ್ಚಿಸಲಾಗಿದೆ.

ಮುಡಾ ಹಗರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಒಂದು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅಕ್ರಮವಾಗಿ 13 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳಿದ್ದವು. ಅದು ಒಂದೆಡೆಯಾದರೆ, ಮುಡಾದ ನಿವೇಶನ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಸಮಗ್ರ ತನಿಖೆಗೆ ಸಿದ್ದರಾಮಯ್ಯ ನ್ಯಾಯಾಂಗ ಆಯೋಗ ರಚಿಸಿದ್ದರು. ಅದರ ವರದಿ ಸಲ್ಲಿಕೆಯಾಗಿದ್ದು ಆ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗಿದೆ. ಕೋವಿಡ್‌-19 ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ವೇಳೆ ವಿರೋಧಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರದ ಉದ್ಯೋಗ ನೀಡಲು ಒತ್ತಾಯಿಸಿದರು. ಆದರೆ ಬಿಜೆಪಿ ಸರ್ಕಾರ ಅದನ್ನು ಪರಿಗಣಿಸಿರಲಿಲ್ಲ. ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬಂದ ಬಳಿಕೆ ಈ ಹಿಂದೆ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮುಂದಾಗಿದೆ. ಮೃತಪಟ್ಟವರ ಕುಟುಂಬದ ಅರ್ಹ ಅವಲಂಬಿತರಿಗೆ ಅನುಕಂಪ ಆಧಾರದ ಮೇಲೆ ಉದ್ಯೋಗ ಒದಗಿಸುವ ಬಗ್ಗೆ ಇಂದಿನ ಸಚಿವ ಪಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.

RELATED ARTICLES

Latest News