Friday, November 22, 2024
Homeರಾಜಕೀಯ | Politicsಟಿಕೆಟ್ ನೀಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಪರ ಶುರುವಾಯ್ತು ಅಭಿಯಾನ

ಟಿಕೆಟ್ ನೀಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಪರ ಶುರುವಾಯ್ತು ಅಭಿಯಾನ

ಬೆಂಗಳೂರು,ಮಾ.13- ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟರ್ ಅಭಿಯಾನವೂ ಶುರುವಾಗಿದೆ. ವಿವಿಧ ಪೊಸ್ಟರ್ಗಳನ್ನು ಹಂಚಿಕೊಳ್ಳುವ ಮೂಲಕ ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿರುವ ಅವರ ಬೆಂಬಲಿಗರು, ಪೊಸ್ಟರ್ಗಳಲ್ಲಿ ಯಾವ ಕಾರಣಕ್ಕೆ ಟಿಕೆಟ್ ನೀಡಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಒಕ್ಕಲಿಗ ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಡುವುದಿಲ್ಲವೇ? ರಾಜಕೀಯದಲ್ಲಿ ಒಳ್ಳೆಯರಿಗೆ ಬೆಲೆ ಇಲ್ಲವೇ? ಹಿಂದೂಗಳ ಪರ ಮಾತನಾಡಿದ್ದಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಇಲ್ಲವೇ ಎಂದು ಪ್ರಶ್ನಿಸುವ ಮೂಲಕ ಪೊಸ್ಟರ್ ಅಭಿಯಾನ ನಡೆಸುತ್ತಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲು ಮೀನಾಮೇಷಾನಾ? ಮೈಸೂರು ಹೈವೇ ಮಾಡಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಇಲ್ಲ? ಎಂದು ಪ್ರತಾಪ್ ಸಿಂಹ ಬೆಂಬಲಿಗರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಹತ್ತು ವರ್ಷಗಳಲ್ಲಿ ಹನ್ನೆರಡು ಟ್ರೈನ್ ತಂದಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲು ಹಿಂದೇಟು ಹಾಕಲಾಗುತ್ತಿದಿಯಾ? ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಇದೇ ಸೋಮವಾರ ರಾತ್ರಿ (ಮಾ. 11) ರಾತ್ರಿ ಮೈಸೂರಿನ ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ ಬಂದಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪಬಹುದಾದ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತುಕೊಂಡಿರುವ ತಮ್ಮ ಅಭಿಮಾನಿಗಳಿಗೆ, ಮೈಸೂರಿನ ನಾಗರಿಕರಿಗೆ, ಸಂಘ – ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದ್ದರು.

ಅಷ್ಟೇ ಅಲ್ಲ, ತಮ್ಮನ್ನು ಟೀಕೆಗಳ ಮೂಲಕ ತಿದ್ದಿ ತೀಡಿದವರಿಗೂ ಒಂದು ತಿಳಿಯಾದ ಧನ್ಯವಾದ ಹೇಳಿ, ಹಗುರಾದರು. ನನಗೆ ಟಿಕೆಟ್ ಸಿಗುವುದು ಅನುಮಾನ ಎಂದಾದಾಗ ನನ್ನ ಪರವಾಗಿ ಹಲವಾರು ಸಂಘ ಸಂಸ್ಥೆಗಳು ನಿಂತವು. ಜನರು ನಿಂತರು. ಅಚ್ಚರಿಯೆಂದರೆ, ನನ್ನನ್ನು ಟೀಕಿಸುತ್ತಿದ್ದ ಎಡಪಕ್ಷದವರೂ… ಛೇ… ಇವನು ಕೆಲಸ ಮಾಡಿದ್ದಾನೆ. ಇವನಿಗೆ ಟಿಕೆಟ್ ಸಿಗಬೇಕು ಎಂಬಂಥ ಮಾತುಗಳನ್ನಾಗಿಡ್ಡು ನನಗೆ ಅತ್ಯಂತ ಖುಷಿ ತಂದಿದೆ ಎಂದಿದ್ದರು.

ಕಳೆದ ನಾಲ್ಕು ದಿನಗಳಲ್ಲಿ ನೀವು ತೋರಿದ ಪ್ರೀತಿ, ನನ್ನ ಬಗ್ಗೆ ಇಟ್ಟಿರುವ ನಂಬಿಕೆ ನನ್ನಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಜನಪರ ಕೆಲಸಗಳೆಂದರೆ ಅದು ಥ್ಯಾಂಕ್ ಲೆಸ್ ಜಾಬ್ ಎಂದುಕೊಂಡಿದ್ದವ ನಾನು. ಆದರೆ, ನಿಮ್ಮ ಪ್ರೀತಿ ನನ್ನ ಅಭಿಪ್ರಾಯವನ್ನು ಬದಲಾಯಿಸಿದೆ ಎಂದು ಪ್ರತಾಪ್ ವಿಡಿಯೋದಲ್ಲಿ ಹೇಳಿದ್ದರು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಬೆಂಬಲಿಗರು ತಮ್ಮ ಜನನಾಯಕರಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಎಂದು ಪಕ್ಷಕ್ಕೆ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಒಂದು ವೇಳೆ ಪ್ರತಾಪ್ ಸಿಂಹಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಕೂಡ ಇದೆ.

RELATED ARTICLES

Latest News