ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ರಾಜ್ಯದ 100ಕ್ಕೂ ಹೆಚ್ಚು ಬಿಜೆಪಿ ನಾಯಕರ ನಿಯೋಜನೆ

ಬೆಂಗಳೂರು,ಮಾ.1- ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಶಾಸಕರನ್ನು ಪ್ರಚಾರಕ್ಕಾಗಿ ಬಿಜೆಪಿ ನಿಯೋಜನೆ ಮಾಡಲು ಮುಂದಾಗಿದೆ. ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗಳ ರಾಜ್ಯ ಸಚಿವರು ಮತ್ತು ಶಾಸಕರು ಸೇರಿದಂತೆ ಮತ್ತಿತರ ಪದಾಧಿಕಾರಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಕಡೆ ಕನ್ನಡಿಗರು ಉದ್ಯೋಗವರಸಿ ಯಾವ ಯಾವ ರಾಜ್ಯಗಳಿಗೆ ತೆರಳಿದ್ದಾರೋ ಅಂಥವರ ಮನವೊಲಿಸಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರಕ್ಕೆ ತೆರಳುವ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಯಾದ ನಂತರ ಶಾಸಕರ ದಂಡು ಪ್ರಚಾರಕ್ಕೆ ಧುಮುಕಲಿದ್ದಾರೆ. ಚುನಾವಣಾ ಕಾರ್ಯತಂತ್ರ ರೂಪಿಸುವುದರಿಂದ ಹಿಡಿದು ಸೀಟು ಹಂಚಿಕೆ, ರ್ಯಾಲಿಗಳನ್ನು ಆಯೋಜಿಸುವ ಬಗ್ಗೆ ಮತ್ತು ಸಾರ್ವಜನಿಕ ಸಮಾವೇಶಗಳನ್ನು ನಿಗದಿಪಡಿಸುವ ಕುರಿತು ಪಕ್ಷದಲ್ಲಿ ಕಾರ್ಯನಿರತರಾಗಿದ್ದಾರೆ.

ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹರಿಹಾಯುತ್ತಿದ್ದರೆ, ತಮಿಳು ನಾಡಿನ ವಿಧಾನಸಭೆ ಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಹಿಸಿಕೊಂಡಿದ್ದಾರೆ. ಅವರು ಅಲ್ಲಿ ಎಐಎಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಚರ್ಚಿಸುತ್ತಿದ್ದಾರೆ. ತಮಿಳು ನಾಡು ಮತ್ತು ಕೇರಳ ಹಾಗೂ ಪುದುಚೇರಿಯಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಚುನಾವಣೆಯಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.

ಕರ್ನಾಟಕದವರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಧ್ಯಮ ಉಸ್ತುವಾರಿ ಮತ್ತು ಚುನಾವಣಾ ಪ್ರಚಾರದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು , ಪುದುಚೇರಿಯ ಚುನಾವಣೆ ಸಹ ಉಸ್ತುವಾರಿಯಾಗಿದ್ದಾರೆ. ತಮ್ಮ ಸಾಮಥ್ರ್ಯ ವ್ಯಾಪ್ತಿಯಲ್ಲಿ ಹೆಚ್ಚು ಜನರನ್ನು ತಲುಪಲು ನೋಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ ಅವರು ಬಿಜೆಪಿಯ ಕೆಲವು ಹಿರಿಯ ಶಾಸಕರೊಂದಿಗೆ ಕೇಡರ್ ಮಟ್ಟದಲ್ಲಿ ಮತ್ತು ಕೇರಳದಲ್ಲಿ ಮೂಲ ನೆಲೆಯನ್ನು ಉತ್ತೇಜಿಸಲು ನೋಡುತ್ತಿದ್ದಾರೆ.

ನಿನ್ನೆ ಸಿ.ಟಿ. ರವಿ ತಮಿಳು ನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಹ್ಲಾದ್ ಜೋಷಿಯವರು, ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ನಗರದಲ್ಲಿರುವ ಕೇರಳಿಗರನ್ನು ಭೇಟಿ ಮಾಡಿ ಅವರಿಗೆ ಹತ್ತಿರವಾಗಲು ನೋಡುತ್ತಿದ್ದಾರೆ.