ಬೆಂಗಳೂರು,ಡಿ.9- ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ)ಹುದ್ದೆಗೆ ನಡೆಯುತ್ತಿದ್ದ ತುಮಕೂರಿನ ಪರೀಕ್ಷಾ ಕೇಂದ್ರ ವೊಂದರಲ್ಲಿ ಸಿಸಿಟಿವಿ ಕಣ್ಗಾವಲಿದ್ದರೂ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯನ್ನು ತುಮಕೂರಿನ ತಿಲಕ್ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ನಿನ್ನೆ ಪಿಡಿಓ ಹುದ್ದೆಗಾಗಿ ಪರೀಕ್ಷೆ ನಡೆಯುತ್ತಿತ್ತು. ತುಮಕೂರಿನ ನಗರದ ಲಾ ಕಾಲೇಜಿನ ಪರೀಕ್ಷೆ ಕೇಂದ್ರದಲ್ಲಿ ಬೆಂಗಳೂರಿನ ರಾಮಮೂರ್ತಿನಗರದ ನಿವಾಸಿಯಾದ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ.
ಆ ವೇಳೆ ಪರೀಕ್ಷೆ ಕೆಂದ್ರದೊಳಗೆ ಎಲ್ಲರ ಕಣ್ತಪ್ಪಿಸಿ ಬ್ಲೂಟೂತ್ ತೆಗೆದುಕೊಂಡು ಹೋಗಿದ್ದಾನೆ. ಅಭ್ಯರ್ಥಿಯ ಚಲನ ವಲನ ಗಮನಿಸಿದ ಕೊಠಡಿಯ ಮೇಲ್ವಿಚಾರಕರು ಪರಿಶೀಲನೆ ನಡೆಸಿದಾಗ ಬನಿಯನ್ ಒಳಗೆ ಬ್ಲೂಟೂತ್ ಕಂಡು ಬಂದಿದೆ.
ತಕ್ಷಣ ಈ ವಿಷಯವನ್ನು ಮೇಲ್ವಿಚಾರಕರು ಕಾಲೇಜು ಪ್ರಾಂಶುಪಾಲರಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಲಕ್ ಪಾರ್ಕ್ ಪೊಲೀಸರಿಗೆ ಪ್ರಾಂಶುಪಾಲರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಆ ಅಭ್ಯರ್ಥಿಯನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿಕೊಂಡಿದ್ದಾರೆ.ಆರೋಪಿ ಅಭ್ಯರ್ಥಿ ಬ್ಲೂಟೂತ್ ಬಳಸಿ ಪ್ರಶ್ನೆಗಳಿಗೆ ಉತ್ತರಿಸಿ ದ್ದಾನೆಯೇ ಎಂಬುದನ್ನು ತಜ್ಞರನ್ನು ಕರೆಸಿ ತನಿಖೆ ನಡೆಸುತ್ತಿದ್ದಾರೆ.