ಮೈಸೂರು, ಫೆ. 27-ಬ್ಯಾಂಕ್‌ಗೆ ಕಟ್ಟಬೇಕಿದ್ದ 6.7 ಲಕ್ಷ ಹಣವನ್ನು ಕ್ಯಾಶಿಯರ್ ಲಪಟಾಯಿಸಿದ ಪ್ರಕರಣ ಜಿಲ್ಲೆಯ ನಂಜನಗೂಡು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಜನೂರು ಗ್ರಾಮದ ಕ್ಯಾಷಿಯರ್ ಮಹದೇವ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಲವು ತಿಂಗಳಿಂದ ಮಹದೇವ್ ನಂಜನಗೂಡು ಗುಂಡ್ಲುಪೇಟ್ ಮುಖ್ಯ ರಸ್ತೆಯಲ್ಲಿರುವ ಎಸ್‌ಎಲ್ ವಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.
ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ ಪಡೆದು ತೆರಳಿದ್ದಾಗ ವ್ಯಾಪಾರ- ವಹಿವಾಟಿನಲ್ಲಿ ಬಂದ ಹಣವನ್ನ ಬ್ಯಾಂಕ್ ಗೆ ಕಟ್ಟುವಂತೆ ಮಹದೇವ್‌ಗೆ ತಿಳಿಸಿದ್ದರು.
ರಜೆ ಮುಗಿಸಿ ವಾಪಸ್ ಬಂದಾಗ ವ್ಯಾಪಾರವಾಗಿ ಸಂಗ್ರಹವಾಗಿದ್ದ 6.70 ಲಕ್ಷ ಹಣ ಕ್ಯಾಶಿಯರ್ ಮಹದೇವ್ ಕಟ್ಟದೆ ಕೆಲಸಕ್ಕೂ ಬಾರದೆ ನಾಪತ್ತೆಯಾಗಿದ್ದರು.
ಮಹದೇವರನ್ನು ಪತ್ತೆ ಹಚ್ಚಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಸಮಯಾವಕಾಶ ಪಡೆದಿದ್ದರು.
ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಆನಂದ್ ಅವರು ಮಹದೇವ್ ವಿರುದ್ಧ ನಂಜನಗೂಡು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.