ಬೆಂಗಳೂರು,ಏ.11- ಜಾತಿ ಗಣತಿ ವರದಿ ಕುರಿತು ಎಲ್ಲರ ಅಭಿಪ್ರಾಯ ಪಡೆದು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ವರದಿಯಲ್ಲಿ ಏನಿದೆ? ಏನಿಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಮೊದಲು ಬಹಿರಂಗವಾಗಲಿ. ಆನಂತರ ಎಲ್ಲರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಯಾವ ನಿರ್ಧಾರ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.
ವರದಿಯಲ್ಲಿರುವ ಅಂಶಗಳು ಬಹಿರಂಗವಾದ, ನಂತರ ವಿಧಾನಮಂಡಲದ ಅಧಿವೇಶನ ಕರೆದು ಚರ್ಚೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
169 ಕೋಟಿ ಖರ್ಚು ಮಾಡಿ ಸಿದ್ದಪಡಿಸಲಾಗಿರುವ ವರದಿ ಬಹಿರಂಗಗೊಳ್ಳದೆ, ಅವೈಜ್ಞಾನಿಕ ಎಂದೆಲ್ಲ ಟೀಕೆ ಮಾಡಿರುವುದು ಸರಿಯಲ್ಲ. ಮೊದಲು ವರದಿಯಲ್ಲಿನ ಅಂಶಗಳನ್ನು ಹಿಡಿದು ಅದರ ಮೇಲೆ ಚರ್ಚೆ ಮಾಡಲಿ. ಆಗ ಅದರಲ್ಲಿನ ಸರಿತಪ್ಪುಗಳು ಚರ್ಚೆಯಾಗಲಿ, ವಿಧಾನಮಂಡಲದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತ ಅವಕಾಶವಿದೆ ಎಂದರು.