ಬೆಂಗಳೂರು,ಏ.12- ಜಾತಿ ಜನಗಣತಿಯ ವರದಿ ಸಂಪುಟದಲ್ಲಿ ಮಂಡನೆಯಾಗುತ್ತಿದ್ದಂತೆ ಸಂಪುಟದ ಸಚಿವರು ಅದನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.
ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ವೈಜ್ಞಾನಿಕವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ. 1.65 ಲಕ್ಷ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ವೈಜ್ಞಾನಿಕವಾಗಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ವರದಿಯಲ್ಲಿ ದತ್ತಾಂಶಗಳನ್ನು ಬದಲಾವಣೆ ಮಾಡಲಾಗಿದೆ ಎಂಬುದು ಸಂಪೂರ್ಣ ಆಧಾರರಹಿತ ಎಂದರು.
ಎಸ್‌ಸಿ/ಎಸ್‌ಟಿ, ಓಬಿಸಿ ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು ಎಲ್ಲಾ ಜಾತಿಗಳನ್ನೂ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಂಕಿ ಅಂಶಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಇದೇ 17ರಂದು ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಮಂಡಿಸಲಾಗುತ್ತದೆ. ಅನಂತರ ಅದರಲ್ಲಿರುವ ಅಂಕಿ ಅಂಶಗಳು ಹಾಗೂ ಮಾಹಿತಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಎಲ್ಲಾ ಸಚಿವರಿಗೂ ವರದಿಯನ್ನು ನೀಡುವ ಕೆಲಸವಾಗುತ್ತಿದೆ ಎಂದು ಹೇಳಿದರು.