ಬೆಂಗಳೂರು, ಏ.17-ರಾಜ್ಯದಾದ್ಯಂತ ಭಾರೀ ವಿವಾದದ ಕಿಚ್ಚು ಹಚ್ಚಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಲ್ಲಿಸಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಜನಗಣತಿ ಎಂದು ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಎಸ್‌ಇಎಸ್ -2015) ಯಲ್ಲಿನ ಶಿಫಾರಸುಗಳ ಕುರಿತು ಸಂಜೆ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಜನಗಣತಿ ಎಂದು ಕರೆಯಲ್ಪಡುವ ವರದಿಯಿಂದಾಗಿ ಉಂಟಾಗಿರುವ ಜಾತಿ ಗೊಂದಲವನ್ನು ಪರಿಹರಿಸುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು, ಸರ್ಕಾರದ ನಿರ್ಣಯದ ಕುರಿತು ತೀವ್ರ ಕುತೂಹಲ ನಿರ್ಮಾಣವಾಗಿದೆ. ಜಾತಿಗಣತಿ ವರದಿ ಕುರಿತು ಪ್ರಸ್ತುತ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನಿಸಿದರೆ, ಯಾವುದೇ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸುರಕ್ಷಿತ ರೀತಿಯಲ್ಲಿ ವರ್ತಿಸುವ ಸಾಧ್ಯತೆಗಳಿವೆ.
ಇದರಂತೆ ವರದಿಯನ್ನು ಅಧ್ಯಯನ ಮಾಡಲು ಸಚಿವ ಸಂಪುಟವು ಉಪ ಸಮಿತಿಯನ್ನು ಅಥವಾ ನಿವೃತ್ತ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಲ್ಲದೆ, ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನೂ ಕರೆಯಬಹುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಬೇಕಾದ ಸಂಗತಿಗಳ ಅಜೆಂಡಾ ಸಿದ್ಧಪಡಿಸಿದೆ.ಜಾತಿ ಗಣತಿ ವರದಿಯಲ್ಲಿ ಶಿಫಾರಸು ಮಾಡಿದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 51ಕ್ಕೆ ಏರಿಕೆ ಮಾಡುವ ಕುರಿತು ಪ್ರಮುಖವಾಗಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಜಾತಿ ಗಣತಿ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಈ ಅಂಕಿ-ಅಂಶಗಳ ಬಗ್ಗೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವರದಿಯಲ್ಲಿ ತಮ್ಮ ಸಮುದಾಯದ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ, ಅವೈಜ್ಞಾನಿಕವಾಗಿದೆ. 10 ವರ್ಷಗಳಷ್ಟು ಹಳೆಯದಾದ ಸಮೀಕ್ಷಾ ವರದಿಯನ್ನು ಈಗ ಒಪ್ಪಲು ಸಾಧ್ಯವಿಲ್ಲ ಎಂದು ತಮ್ಮ
ನಿಲುವನ್ನು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು, ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಹೊಸದಾಗಿ ಜಾತಿ ಗಣತಿ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ವಿಶೇಷವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸಚಿವರುಗಳು ಸಮುದಾಯದ ಮಠ, ಸಂಘಟನೆಗಳ ಒತ್ತಡದಂತೆ ಒಟ್ಟುಗೂಡಿ ಸಮಾಲೋಚನೆ ನಡೆಸಿದ್ದು, ವೈಜ್ಞಾನಿಕ ಮಾನದಂಡದಲ್ಲಿ ಹೊಸದಾಗಿ ಸಮೀಕ್ಷೆ ನಡೆಯಲಿ ಎಂಬ ವಾದಕ್ಕೆ ಪಟ್ಟು ಹಿಡಿಯಲು ಬಯಸಿದ್ದಾರೆ. ಉಪ ಜಾತಿಗಳ ದಾಖಲಾತಿ ಸಮರ್ಪಕ ರೀತಿಯಲ್ಲಿ ಆಗಿಲ್ಲ. ಹಾಗಾಗಿ ಹಾಲಿ ಸಮೀಕ್ಷಾ ವರದಿಯನ್ನು ಒಪ್ಪಲುತಯಾರಿಲ್ಲ ಎಂಬ ನಿಲುವನ್ನು ಪ್ರತಿಪಾದಿಸಲು ಸಮುದಾಯವಾರು ಸಚಿವರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಮುದಾಯವಾರು ವೇದಿಕೆಗಳು ರೆಡಿ:
ಕೆ.ಕಾಂತರಾಜು ರಾಜ್ಯ ಹಿಂದುಳಿದ ವರ್ಗದ ಸಮೀಕ್ಷಾ ವರದಿ -2015 ಆಧರಿಸಿದ ಕೆ.ಜಯಪ್ರಕಾಶ್ ಹೆಗ್ಡೆ ಆಯೋಗದ ದತ್ತಾಂಶ ಅಧ್ಯಯನ ವರದಿಯಲ್ಲಿ ವಾಸ್ತವದ ದೃಢೀಕರಣಕ್ಕಿಂತ ಎಲ್ಲಸಮುದಾಯಗಳನ್ನು ಸಮಾಧಾನಪಡಿಸುವ ಪ್ರಯತ್ನಕ್ಕೆ ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದಕ್ಕೆ ಪರಿಶಿಷ್ಟ ಜಾತಿಯ ಒಳ ಮೀಸಲಿಗೆ ಪರ್ಯಾಯ ಮಾನದಂಡ ಆಯ್ಕೆಯನ್ನು ಉದಾಹರಿಸಿ ವರದಿಯನ್ನು ವಿರೋಧಿಸಲು ಸಮುದಾಯವಾರು ಸಚಿವರ ಮೇಲೆ ಒತ್ತಡ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.
ವಿಶೇಷ ಅಧಿವೇಶನಕ್ಕೆ ಒತ್ತಡ:
ಸಮುದಾಯದ ಸಚಿವರ ವಿರುದ್ದ ಸಮುದಾಯದ ಸಂಘದ ಅಧ್ಯಕ್ಷರು ಕಿಡಿಕಾರಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಕೂಡ ಹೆಚ್ಚಾಗಿದೆ. ವಿಶೇಷ ಅಧಿವೇಶನ ಕರೆಯಿರಿ ಎಂದು ಅನೇಕರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ವಿಶೇಷ ಅಧಿವೇಶನ ಕರೆಯುವಂತೆ ಪರಿಶಿಷ್ಟ ಹಾಗೂ ಹಿಂದುಳಿದ ಸಮುದಾಯದ ಸಚಿವರು ಸಿಎಂಗೆ ಸಲಹೆ ನೀಡಿದ್ದು, ಒತ್ತಡ ಹೇರುತ್ತಿದ್ದಾರೆ.
ವಿಶೇಷ ಅಧಿವೇಶನ ಕರೆದು ಚರ್ಚೆ ಮಾಡಬೇಕು. ಅಧಿವೇಶನದಲ್ಲಿ ಎಲ್ಲ ಶಾಸಕರು ಭಾಗಿಯಾಗುತ್ತಾರೆ. ಅಧ್ಯಯನ ಸಮಿತಿ ಮಾಡಿ, ಉಪಸಮಿತಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಕೆಲ ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಚಿವರ ಸಲಹೆ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಅಧಿವೇಶನ ಕರೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ನಾಳಿನ ಸಚಿವ ಸಂಪುಟ ಸಭೆಯಲ್ಲಿ ಸಚಿವರೊಂದಿಗೆ ಮುಖ್ಯಮಂತ್ರಿಗಳು ಈ ಬಗ್ಗೆ ಸಮಾಲೋಚನೆ ನಡೆಯಲಿದ್ದಾರೆ ಎನ್ನಲಾಗ್ತಿದೆ. ಸಚಿವರ ಅಭಿಪ್ರಾಯದ ಮೇರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸಮೀಕ್ಷಾ ವರದಿ ವಿವರ:
ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ಮುಸ್ಲಿಮರು ಮತ್ತು ಉಪ ಪಂಗಡಗಳು – 76.99 ಲಕ್ಷ, ವೀರಶೈವ ಲಿಂಗಾಯತ ಮತ್ತು ಉಪ ಪಂಗಡಗಳು 66.35 ಲಕ್ಷ, ಒಕ್ಕಲಿಗ ಮತ್ತು ಉಪ ಪಂಗಡಗಳು – 61 ಲಕ್ಷ, ಕುರುಬರು ಮತ್ತು ಉಪ ಪಂಗಡಗಳು – 43.72 ಲಕ್ಷ, ಈಡಿಗ ಹಾಗೂ ಉಪ ಪಂಗಡಗಳು – 14.12 ಲಕ್ಷ, ಬ್ರಾಹ್ಮಣರು ಮತ್ತು ಉಪ ಪಂಗಡಗಳು – 15 ಲಕ್ಷ, ಬಲಿಜ ಮತ್ತು ಉಪ ಪಂಗಡಗಳು – 10.41 ಲಕ್ಷದಷ್ಟು ಜನಸಂಖ್ಯೆ ಇದೆ ಎಂದು ನಮೂದಿಸಲಾಗಿದೆ.
ಪ್ರವರ್ಗವಾರು ಜಾತಿಗಳ ಸಂಖ್ಯೆ ಹಂಚಿಕೆ:
ರಾಜ್ಯದಲ್ಲಿ 5.98 ಕೋಟಿ ಜನರ ಸಮೀಕ್ಷೆ ನಡೆಸಿದ ಆಯೋಗವು ತನ್ನ ವರದಿಯಲ್ಲಿ ಪ್ರವರ್ಗವಾರು ಜಾತಿಗಳ ಸಂಖ್ಯೆಯನ್ನು ಹಂಚಿಕೆ ಮಾಡಿದೆ ಎಂದು ಗೊತ್ತಾಗಿದೆ. ಆ ಪ್ರಕಾರ ಪ್ರವರ್ಗ-1ಎನಲ್ಲಿ 34.96 ಲಕ್ಷ, ಪ್ರವರ್ಗ-1ಬಿನಲ್ಲಿ 73.92 ಲಕ್ಷ, (ಎರಡೂ ವರ್ಗಗಳಿಂದ 1.08 ಕೋಟಿ ಜನಸಂಖ್ಯೆ), ಪ್ರವರ್ಗ-2ಎನಲ್ಲಿ 77.78 ಲಕ್ಷ, ಪ್ರವರ್ಗ -2ಬಿನಲ್ಲಿ 75.25 ಲಕ್ಷ (ಎರಡೂ ವರ್ಗಗಳಿಂದ 1.53 ಕೋಟಿ ಜನಸಂಖ್ಯೆ) ಪ್ರವರ್ಗ-3 ಎನಲ್ಲಿ 72.99 ಲಕ್ಷ, ಪ್ರವರ್ಗ-3ಬಿನಲ್ಲಿ 81.37 ಲಕ್ಷ (ಎರಡೂ ವರ್ಗಗಳಿಂದ 1.54 ಕೋಟಿ ಜನಸಂಖ್ಯೆ) ಜನಸಂಖ್ಯೆ ಇದೆಯೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಸಮೀಕ್ಷೆಗೊಳಪಡಿಸಿದ ಒಟ್ಟೂ 5.98 ಕೋಟಿ ಜನಸಂಖ್ಯೆಯಲ್ಲಿ ವಿವಿಧ ಪ್ರವರ್ಗಗಳವಾರು 4.16 ಕೋಟಿ ಜನಸಂಖ್ಯೆ ಇದೆಯೆಂದು ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.