Sunday, September 14, 2025
Homeರಾಷ್ಟ್ರೀಯ | Nationalಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜದ ಪಿಡುಗು : ನ್ಯಾಯಮೂರ್ತಿ ಹೆಚ್‌.ಪಿ. ಸಂದೇಶ್‌

ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜದ ಪಿಡುಗು : ನ್ಯಾಯಮೂರ್ತಿ ಹೆಚ್‌.ಪಿ. ಸಂದೇಶ್‌

Caste, crime, corruption are the scourge of society: Justice H.P. Sandesh

ಬೆಂಗಳೂರು, ಸೆ.14- ದೇಶದಲ್ಲಿ ಸ್ಥಿತ್ಯಂತರವಾಗಲು ಸಮಾಜದ ಸಮಸ್ಯೆಗಳಾದ ಕ್ಯಾಸ್ಟ್‌ (ಜಾತಿ), ಕ್ರೈಮ್‌ (ಅಪರಾಧ) ಮತ್ತು ಕರಪ್ಷನ್‌ (ಭ್ರಷ್ಟಾಚಾರ) ಕಾರಣಗಳಾಗಿವೆ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಹೆಚ್‌.ಪಿ. ಸಂದೇಶ್‌ರವರು ಹೇಳಿದರು.

ಈ ಸಮಸ್ಯೆಗಳನ್ನು ಹೋಗಲಾಡಿಸಲು ಹೆಡ್‌ (ಬುದ್ಧಿ-ತಲೆ) ಹಾರ್ಟ್‌ (ಹೃದಯ-ಮನಸ್ಸು) ಮತ್ತು ಹ್ಯಾಂಡ್‌ (ಕೈ-ಹಸ್ತ)ಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಅವರು ಕರೆ ನೀಡಿದರು.
ರಾಜಾಜಿನಗರದ ಅಭಿಮಾನಿ ವಸತಿಯಲ್ಲಿ ಮೈಸೂರಿನ ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಮತ್ತು ಪ್ರತಿಭಾ ಸಂಸತ್‌ ಹಮಿಕೊಂಡಿದ್ದ ಸಂಸ್ಕೃತೋತ್ಸವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮೋಹ-ಆಸೆ ಇದ್ದಾಗ ಅಪರಾಧಗಳು ಘಟಿಸುತ್ತವೆ ಎಂದರು.

ಮೋಹವನ್ನು ದೂರವಿಟ್ಟಾಗ ಸಮಾಜಕ್ಕೆ ಒಳಿತಾಗುತ್ತದೆ. ನಮ ಬುದ್ಧಿ, ಮನಸ್ಸು ಬಳಸಿ ಸಮಾಜದ ಶೋಷಿತರು, ಊಟವಿಲ್ಲದವರು, ವಿಧವೆಯರಂಥವರಿಗೆ ದನಿಯಾಗಬೇಕು. ಕೈಗಳಿಂದ ಕೆಲಸ ಮಾಡಿ ಬರತಕ್ಕ ಅದಾಯದಲ್ಲಿ ನೊಂದವರಿಗೆ ನೆರವು ನೀಡಬೇಕು. ಮನುಷ್ಯ ತುಕ್ಕು ಹಿಡಿಯದೆ ತನ್ನನ್ನು ಸವೆಸುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತವಿಶ್ವಾಸ, ನಿರ್ಭಯತೆ ಇವು ಮಾನವನಿಗೆ ಬೇಕಾದ ಪಂಚಮಂತ್ರಗಳು. ಸಂಸ್ಕೃತ ಎಂದೊಡನೆ ನಮ ದೇಶದ ದೇವಭಾಷೆ, ಶಾಸ್ತ್ರೀಯ ಭಾಷೆ ಎಂಬ ಪರಿಕಲ್ಪನೆ ಮೂಡುತ್ತದೆ. 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತ ನಮ ಭಾಷೆಯಲ್ಲಿ ಶೇ.40ರಷ್ಟು ಬೆರೆತಿದೆ. ಸಂಸ್ಕೃತವು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ರಾಮಾಯಣ, ಮಹಾಭಾರತ, ನ್ಯಾಯಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಅರ್ಥಶಾಸ್ತ್ರ ಎಲ್ಲಕ್ಕೂ ಸಂಸ್ಕೃತದ ಕೊಡುಗೆ ಅಪಾರ ಎಂದು ಅವರು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಸ್ಕೃತೋತ್ಸವದ ಕುರಿತು ಭಾಷಣ ಮಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್‌‍. ಅಹಲ್ಯಾಶರ್ಮ ಅವರು ಇಂದು ಜಗತ್ತಿನ ಜನತೆ ನೆಮದಿ ತಂದುಕೊಳ್ಳಲು ಧ್ಯಾನ, ಯೋಗ ಇತ್ಯಾದಿ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವೆಲ್ಲಕ್ಕೂ ಸಂಸ್ಕೃತವೇ ಮೂಲವಾಗಿದೆ ಎಂದು ಪ್ರತಿಪಾದಿಸಿದರು.

ಸಂಸ್ಕೃತ ಭಾಷೆಯಲ್ಲಿ ಯಾವ ಪದವನ್ನು ಎಲ್ಲಿಟ್ಟು ಬಳಸಿದರೂ ಅರ್ಥ ವ್ಯತ್ಯಾಸವಾಗುವು ದಿಲ್ಲ. ಇಂದಿನ ಕೃತಕ ಬುದ್ಧಿಮತ್ತೆ (ಎಐ)ಗೆ ಬೇಕಾಗಿರುವ ಭಾಷೆಯೇ ಇದು. ಒಂದು ವಾಕ್ಯ, ಪದ್ಯ ಬರೆಯಬೇಕಾದರೆ, ಸಂಸ್ಕೃತ ಭಾಷೆಯ ಲಾಲಿತ್ಯ ಅನುಪಮ. ಸಂಸ್ಕೃತ ಸಾಹಿತ್ಯ ಓದಿದರೆ ಆನಂದಾನುಭೂತಿ ಉಂಟಾಗುವುದು. ಸಂಸ್ಕೃತ ಸಾಹಿತ್ಯವು ವೈಜ್ಞಾನಿಕ ಭಾಷಾ ಸ್ವರೂಪವನ್ನು ಹೊಂದಿದ್ದು, ತನ್ನ ಅಂತಃ ಸತ್ವದಿಂದ ಉಳಿದು ಬಂದಿದೆ ಎಂದು ಅವರು ನುಡಿದರು.

ಯೋಗಶಾಸ್ತ್ರದ ಬಗ್ಗೆ ಸಾವಿರಾರು ಪುಟಗಳಲ್ಲಿ ಹೇಳುವ ವಿಚಾರಗಳನ್ನು ಪತಂಜಲಿಯ 196 ಯೋಗಸೂತ್ರಗಳು ಹೇಳುತ್ತವೆ. 700 ಶ್ಲೋಕಗಳ ಭಗವದ್ಗೀತೆ ಸಮಾಜದಲ್ಲಿ ಪರಿವರ್ತನೆ ತರುತ್ತದೆ. ಜಗತ್ತಿನ ಅತಿಹೆಚ್ಚು ಸಾಹಿತ್ಯ ಕೃತಿಗಳು ಮತ್ತು ಹಸ್ತ ಪ್ರತಿಗಳಿರುವುದು ಸಂಸ್ಕೃತ ಭಾಷೆಯಲ್ಲಿ ಎಂದು ಅವರು ಹೇಳಿದರು.

ಸಂಸ್ಕೃತ ವಿಶ್ವವಿದ್ಯಾನಿಲಯವು ಸಂಸ್ಕೃತ ಕೃತಿಗಳು ಮತ್ತು ಹಸ್ತಪ್ರತಿಗಳ ಡಿಜಿಟಲೀಕರಣ ಮಾಡುತ್ತಿದೆ. ಸಂಸ್ಕೃತವನ್ನು ಕಾಪಿಡುವುದರ ಮೂಲಕ ಸಂಸ್ಕೃತಿಯ ಸಂರಕ್ಷಣೆ ಮತ್ತು ಜನಜೀವನದಲ್ಲಿ ಅದರ ಅಳವಡಿಕೆಗೆ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಶರಶ್ಚಂದ್ರ ಅವರು ಮಾತನಾಡಿ, ನಾನು ಸಂಸ್ಕೃತವನ್ನು ಮೃತ ಭಾಷೆ ಎಂದು ತಿಳಿದಿದ್ದೆ. ಶಿವಕುಮಾರಸ್ವಾಮಿ ಅವರ ಪರಿಚಯವಾದ ಮೇಲೆ ಅದರ ಹಿರಿಮೆ-ಗರಿಮೆಗಳ ಅರಿವಾಯಿತು ಎಂದರು.

ನಮ ದೇಶಕ್ಕಿಂತ ಜರ್ಮನಿಯಲ್ಲಿ ಸಂಸ್ಕೃತ ಜನಪ್ರಿಯವಾಗಿದೆ. ಸಂಸ್ಕೃತದ ಮೂಲ ಇನ್ನೂ ನಿಗೂಢವಾಗಿದೆ. ಎಲ್ಲಾ ಭಾಷೆಗಳಿಗೂ ಮೂಲವಾಗಿದೆ. ಶಿವಮೊಗ್ಗದ ಮತ್ತೂರಿನಲ್ಲಿ ಪೂರ್ಣವಾಗಿ ಸಂಸ್ಕೃತ ಮಾತನಾಡುವವರೇ ಇದ್ದಾರೆ. ಅದೇ ರೀತಿ ಇಂದು ಸಂಸ್ಕೃತವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್‌ ಡಾ.ಎಂ. ಶಿವಕುಮಾರಸ್ವಾಮಿ ಅವರು ಇಂದಿನ ಸಭೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮೂರೂ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದಾರೆ. ಇದು ಒಂದು ಅಪೂರ್ವ ಸಂಗಮವಾಗಿದೆ ಎಂದು ಬಣ್ಣಿಸಿದರು. ಪ್ರಾಧ್ಯಾಪಕ ವೆಂಕಟೇಶ್‌ ಅವರು ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.

RELATED ARTICLES

Latest News