ಬೆಂಗಳೂರು,ಅ.8-ಜಾತಿಗಣತಿ ಹೆಸರಿನಲ್ಲಿ ಹತ್ತು ವರ್ಷಗಳ ಹಿಂದೆಯೇ 150 ಕೋಟಿ ರೂಪಾಯಿ ಹಣವನ್ನು ಪೋಲು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಾರ್ವಜನಿಕ ಹಣವನ್ನು ಅಪವ್ಯಯ ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲ ತಾಣ ಎಕ್್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಜಾತಿಗಣತಿ ನಡೆಸಲು ಎಷ್ಟು ಸಮಯ ಬೇಕು ಎನ್ನುವ ಬಗ್ಗೆ ಪೂರ್ವಯೋಜನೆ ಇಲ್ಲ? ಜಾತಿಗಣತಿಯಲ್ಲಿ ಯಾವ ಪ್ರಶ್ನೆ ಕೇಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಜಾತಿಗಣತಿಗೆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿ ಯಾರು? ಪಾಠ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.
ಯಾವುದೇ ಪೂರ್ವಸಿದ್ಧತೆ, ರೂಪುರೇಷೆ, ಗೊತ್ತು-ಗುರಿ ಇಲ್ಲದೆ, ಕೇವಲ ರಾಜಕೀಯ ತೆವಲಿಗೆ ಮಾಡುತ್ತಿರುವ ಈ ಜಾತಿಗಣತಿಯಿಂದ ಕನ್ನಡಿಗರಿಗೆ ನಯಾ ಪೈಸೆ ಉಪಯೋಗವಿಲ್ಲ. ಕಾಂಗ್ರೆಸ್ ಸರ್ಕಾರ, ಈಗ ಮತ್ತೊಮ್ಮೆ 650 ಕೋಟಿ ರೂಪಾಯಿ ಕನ್ನಡಿಗರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುತ್ತಿದೆ ಎಂದು ವಾಗ್ದಳಿ ನಡೆಸಿದ್ದಾರೆ.
ಬೆಲೆ ಇಳಿಕೆ ಯಾವಾಗ?
ಮತ್ತೊಂದು ಪೋಸ್ಟ್ ನಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಏರಿಸಿರುವ ಹಾಲು, ಪೆಟ್ರೋಲ್, ಡಿಸೇಲ್, ನೀರು, ವಿದ್ಯುತ್ ಬೆಲೆಯನ್ನು ಇಳಿಸುವುದು ಯಾವಾಗ? ಎಂದು ಅಶೋಕ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಸಿದ್ದರಾಮಯ್ಯ ಟ್ಯಾಕ್್ಸ (ಜಿಎಸ್ ಟಿ) ಎಂದು ವ್ಯಂಗ್ಯವಾಡಿರುವ ಅಶೋಕ್, ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮುಕ್ತಿ ಯಾವಾಗ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಎಸ್ಟಿ ಸುಧಾರಣೆ ನಂತರ ದಿನಬಳಕೆ ವಸ್ತುಗಳಿಂದ ಹಿಡಿದು ಬೈಕು-ಕಾರುಗಳವರೆಗೆ ದೇಶಾದ್ಯಂತ ವ್ಯಾಪಾರ ವಹಿವಾಟು ಜೋರಾಗಿದ್ದು, ಜನಸಾಮಾನ್ಯರು ಸಂತೋಷದಿಂದ ಜಿಎಸ್ಟಿ ಉಳಿತಾಯದ ಲಾಭ ಪಡೆಯುತ್ತಿದ್ದಾರೆ. ವ್ಯಾಪಾರಸ್ಥರು, ವರ್ತಕರು ಸಂತೋಷಗೊಂಡಿದ್ದಾರೆ.ಆದರೆ ರಾಜ್ಯದಲ್ಲಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಮುಂದಾಗಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ
ಇನ್ನೊಂದು ಪೋಸ್ಟ್ ನಲ್ಲಿ ತೀವ್ರ ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಧಾವಿಸಿ, ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು. ಇದೇ ರೀತಿ ಬೆಲೆ ಕಡಿಮೆಯಾದರೆ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನೆರೆ ಪ್ರದೇಶಕ್ಕೆ ಸಿಎಂ ಕಾಟಾಚಾರದ ವೈಮಾನಿಕ ಪರಿಶೀಲನೆ ಯಾತ್ರೆ, ಕುರ್ಚಿ ದಕ್ಕಿಸಿಕೊಳ್ಳಲು ಡಿಸಿಎಂ ಪದೇ ಪದೇ ದೆಹಲಿ ದಂಡಯಾತ್ರೆ.ರೈತರು ಬೆವರು ಸುರಿಸಿ ಬೆಳೆದ ಬೆಳೆಗೆ ಶವಯಾತ್ರೆ. ಇದು ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕದ ರೈತರ ಪಾಡು ಎಂದು ಸರ್ಕಾರದ ವಿರುದ್ದ ಅವರು ವಾಗ್ದಾಳಿ ನಡೆಸಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಶ್ರಮವಹಿಸಿ ದುಡಿದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಪ್ರತಿ ಕ್ವಿಂಟಲ್ಗೆ 3,000- 4,000 ರೂಪಾಯಿ ಸಿಗುತ್ತಿದ್ದದ್ದು, ಈಗ ಕ್ವಿಂಟಲ್ಗೆ 100-200 ರೂಪಾಯಿಗಳಿಗೆ ದಿಢೀರನೆ ಬೆಲೆ ಕುಸಿದಿದ್ದು ಸಾಗಾಟದ ವೆಚ್ಚಕ್ಕೂ ಹಣ ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದು ಅಶೋಕ್ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.