Saturday, October 4, 2025
Homeಬೆಂಗಳೂರುಬೆಂಗಳೂರಲ್ಲಿ ಇಂದಿನಿಂದ ಜಾತಿ ಸಮೀಕ್ಷೆ, ಆರಂಭದಲ್ಲೇ ಹಲವು ವಿಘ್ನ

ಬೆಂಗಳೂರಲ್ಲಿ ಇಂದಿನಿಂದ ಜಾತಿ ಸಮೀಕ್ಷೆ, ಆರಂಭದಲ್ಲೇ ಹಲವು ವಿಘ್ನ

Caste survey in Bengaluru from today, many obstacles at the beginning

ಬೆಂಗಳೂರು, ಅ.4- ಗ್ರೆಟರ್‌ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಆರಂಭದಲ್ಲೇ ಸಮೀಕ್ಷಾದಾರರು ಉಸ್ತುವಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಪ್ರತಿಯೊಬ್ಬ ಸಮೀಕ್ಷಾದಾರರಿಗೂ 200 ರಿಂದ 250ಕ್ಕೂ ಹೆಚ್ಚು ಮನೆಗಳನ್ನು ಗಣತಿಯ ಗುರಿ ನಿಗದಿ ಮಾಡಲಾಗಿದೆ.

ಆದರೆ ಸಮೀಕ್ಷಾದಾರರು ಕೆಲಸ ಮಾಡುವ ಸ್ಥಳ ಹಾಗೂ ವಾಸ ಸ್ಥಳಕ್ಕಿಂತಲೂ ಹೆಚ್ಚು ದೂರದ ಪ್ರದೇಶಕ್ಕೆ ಗಣತಿಗಾಗಿ ನಿಯೋಜನೆ ಮಾಡಿರುವುದು, ಅನಾರೋಗ್ಯ, ಗಂಭೀರ ಸ್ವರೂಪದ ಸಮಸ್ಯೆಗಳಿಂದ ಬಳಲುವವರಿಗೂ ವಿನಾಯಿತಿ ನೀಡದಿರುವ ಬಗ್ಗೆ ಅಸಹನೆಗಳು ಕೇಳಿ ಬಂದಿವೆ. ಬೆಂಗಳೂರಿನ ಐದು ಪಾಲಿಕೆಗಳಲ್ಲೂ ಕೇಂದ್ರ ಸ್ಥಾನದಲ್ಲಿ ಮಸ್ಟರಿಂಗ್‌ ಸೆಂಟರ್‌ ಆರಂಭಿಸಲಾಗಿದ್ದು, ವಾರ್ಡ್‌ ಮಟ್ಟದಲ್ಲೂ ಉಸ್ತುವಾರಿ ಕಚೇರಿಗಳು ಕಾರ್ಯನಿರ್ವಹಿಸಿವೆ.

ವಾರ್ಡ್‌ ಕಚೇರಿ ಬಳಿಗೆ ಇಂದು ಮುಂಜಾನಗೆ ಸಮೀಕ್ಷಾದಾರರು ಆಗಮಿಸಿದ್ದರು, ಅವರಿಗೆ ಗುರುತಿನಚೀಟಿ ಹಾಗೂ ಅಗತ್ಯ ಸಲಕರಣೆಗಳನ್ನು ನೀಡಲಾಯಿತು. ಜೊತೆಗೆ ಸಮೀಕ್ಷೆ ಬೇಕಾಗಿರುವ ಮೊಬೈಲ್‌ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಡಲಾಯಿತು. ಉಸ್ತುವಾರಿ ಕೇಂದ್ರಗಳ ಬಳಿ ಸಮೀಕ್ಷಾದಾರರು ತಮ ಅಸಮಧಾನವನ್ನು ಹೊರ ಹಾಕಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಗೋವಿಂದಯ್ಯ ತಮಗೆ ತೆರೆದ ಹೃದಯ ಚಿಕಿತ್ಸೆಯಾಗಿದೆ. ಪ್ರತಿ ದಿನವೂ ಐದಾರು ಮಾತ್ರೆಗಳನ್ನು ತೆಗೆದುಕೊಳ್ಳಬೇಕಿದೆ. ಮೆಟ್ಟಿಲು ಹತ್ತಿ ಇಳಿಯಬಾರದು ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಆಯುಕ್ತರಿಗೆ ಮನವಿ ಮಾಡಿದ್ದೇನೆ. ಅದನ್ನು ಪರಿಗಣಿಸದೇ ನನ್ನನ್ನು ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ.

ನನ್ನ ಮನೆ ಇರುವುದು ನಂದಿನಿ ಲೇಔಟ್‌ ನಲ್ಲಿ, ಕೆಲಸ ಮಾಡುವುದು ಕೆಂಗೇರಿಯಲ್ಲಿ, ಸಮೀಕ್ಷೆಗೆ ಗರುಡಾಚಾರ್‌ ಪಾಳ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಎಲ್ಲಿಂದ ಎಲ್ಲಿ ಕೆಲಸ ಮಾಡುವುದು. ನನ್ನನ್ನು ಯಾವ ರೀತಿಯಲ್ಲಾದರೂ ಪರೀಕ್ಷೆಗೆ ಒಳ ಪಡಿಸಿ, ಸಮಸ್ಯೆ ಇರುವುದು ನಿಜವಾದರೆ ವಿನಾಯಿತಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಸಚಿವಾಲಯದಲ್ಲಿ ಕೆಲಸ ಮಾಡುವ ಸುಜಾತ ಎಂಬ ಅಧಿಕಾರಿ, ತಮ ಮಗನಿಗೆ ಥರ್ಡ್‌ಗ್ರೆಡ್‌ ಬ್ರೈನ್‌ ಇಂಚುರಿಯಾಗಿ ಹಾಸಿಗೆ ಹಿಡಿದಿದ್ದಾನೆ. ಅತನಿಗೆ ಮೂರು ಹೊತ್ತು ನಾನೇ ಊಟ ಮಾಡಿಸಬೇಕು. ಇಂತಹ ಸಮಸ್ಯೆ ನಡುವೆಯೂ ತರಬೇತಿಗೆ ಹಾಜರಾಗಿದ್ದೆ. ಅಲ್ಲಿ ನನ್ನ ಮೊಬೈಲ್‌ ನಂಬರ್‌ ತಪ್ಪಾಗಿ ನಮೂದಾಗಿತ್ತು. ಅದನ್ನು ಸರಿ ಮಾಡಿಕೊಟ್ಟಿದ್ದೆ.

ಅದನ್ನು ಪರಿಗಣಿಸಿಲ್ಲ, ನನಗೆ ಯಾವ ರೀತಿಯ ಸಂದೇಶಗಳು ಬಂದಿಲ್ಲ. ದೂರದ ಪ್ರದೇಶಕ್ಕೆ ಸಮೀಕ್ಷೆಗೆ ಹಾಕಿದ್ದಾರೆ. ಒಂದು ದಿನದ ಮಟ್ಟಿಗಾದರೆ ಮಗನ ಜವವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಬರಬಹುದು, ಸಮೀಕ್ಷೆ ನಡೆಯುವ 15 ದಿನವೂ ಹೇಗೆ ನಿಭಾಯಿಸುವುದು. ಇಂತಹ ಸ್ಥಿತಿಯಲ್ಲಿ ಏಕಾಗ್ರತೆಯಿಂದ ಹೇಗೆ ಸಮೀಕ್ಷೆ ಮಾಡಲಿ, ಮೂರು ಬಾರಿ ಇಲ್ಲಿ ಬಂದು ಮನವಿ ಮಾಡಿಕೊಂಡಿದ್ದೇನೆ ಆದರೂ ವಿನಾಯಿತಿ ನೀಡಿಲ್ಲ ಎಂದು ಅಳಲು ತೊಡಿಕೊಂಡಿದ್ದಾರೆ.

ರಾಜಾರಾಜೇಶ್ವರಿ ನಗರದಿಂದ ಬಂದಿರುವ ಮತ್ತೊಬ್ಬ ವ್ಯಕ್ತಿ, ತಮ ತಾಯಿಯನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಆಕೆ ಅಧಿಕ ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ಸೂಲಿನ್‌ ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ತೆಗೆದುಕೊಂಡು ನಾನು ನನ್ನ ಕೆಲಸ ಬಿಟ್ಟು ಆಕೆಯ ಜೊತೆಯಲ್ಲಿ ಬಂದಿದ್ದೇನೆ. ಸೋಮವಾರದಿಂದ ನಾನು ಕೆಲಸಕ್ಕೆ ಹೋಗಬೇಕು, ತಾಯಿ ಜೊತೆ ಬರಲು ಹೇಗೆ ಸಾಧ್ಯ. ಇಲ್ಲಿಂದ ಹೊರಮಾವು ಭಾಗಕ್ಕೆ ಗಣತಿಗಾಗಿ ನಿಯೋಜಿಸಿದ್ದಾರೆ. ಅಷ್ಟು ದೂರ ಹೋಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್‌ ಮಾತನಾಡಿ, ನಾನು ಸಂಪೂರ್ಣ ಅಂಧ, ಒಂದು ಚೂರು ಕಣ್ಣು ಕಾಣಿಸುವುದಿಲ್ಲ. ಹೇಗೆ ಸಮೀಕ್ಷೆ ಮಾಡಲಿ, ವಿನಾಯಿತಿ ನೀಡಿ ಎಂದರೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದರು.
ಮತ್ತೊಬ್ಬ ಸಮೀಕ್ಷಾದಾರರು ಮಾತನಾಡಿ, ಬೆಂಗಳೂರಿನಲ್ಲಿ ಬಹುತೇಕರು ಕೆಲಸಕ್ಕಾಗಿ ಬೆಳಗ್ಗೆ 8 ಗಂಟೆಗೆ ಮನೆ ಬಿಡುತ್ತಾರೆ.

ಅಷ್ಟರಲ್ಲಿ ನಾವು ಅವರ ಮನೆಗೆ ಹೋಗಿ ಮಾಹಿತಿ ಪಡೆದುಕೊಳ್ಳಬೇಕು. ಅದಕ್ಕಾಗಿ ನಾವು ಬೆಳಗ್ಗೆ 6 ಗಂಟೆಗೆ ಮನೆ ಬಿಡಬೇಕು, ರಾತ್ರಿ ವಾಪಾಸ್‌‍ ಬರುವುದು ಎಷ್ಟು ಹೊತ್ತಾಗಲಿದೆಯೋ ಗೊತ್ತಿಲ್ಲ. ಮನೆ ಹತ್ತಿರದ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ಆದರೆ ಅಧಿಕಾರಿಗಳು ತಮ ಮನಸೋಯಿಚ್ಚೆ ಸ್ಥಳವನ್ನು ನಿಗದಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿಯೊಬ್ಬರಿಗೆ 250 ಮನೆಗಳ ಗುರಿ ನಿಗದಿ ಪಡಿಸಲಾಗಿದೆ. ನಾಗರಭಾವಿಯಲ್ಲಿ ವಾಸ ಇರುವವರನ್ನು ವಿಜ್ಞಾನನಗರಕ್ಕೆ ನಿಯೋಜನೆ ಮಾಡಿದ್ದಾರೆ. ಅಲ್ಲಿಗೆ ಹೋಗಲು ಸುಮಾರು ಒಂದುವರೆ ಗಂಟೆ ಪ್ರಯಾಣ ಮಾಡಬೇಕಿದೆ. ನಾವು ಸಮೀಕ್ಷೆ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ ಸಮಸ್ಯೆಯನ್ನು ಅರ್ಥೈಸಿಕೊಂಡು ನಿಯೋಜನೆ ಮಾಡಿ. ಅನಗತ್ಯವಾಗಿ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಗಣತಿದಾರರನ್ನು ನಿಯೋಜನೆ ಮಾಡುವ ಮೊದಲು ಪ್ರತಿಯೊಬ್ಬರಿಂದಲೂ ಅವರು ಕೆಲಸ ಮಾಡುವ ಮತ್ತು ವಾಸದ ಸ್ಥಳ ವಿಳಾಸ ಪಡೆದುಕೊಂಡಿದ್ದಾರೆ. ಅದಕ್ಕೆ ಹತ್ತಿರದ ಪ್ರದೇಶಕ್ಕೆ ನಿಯೋಜನೆ ಮಾಡುವ ಬದಲಿಗೆ, ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಆರಂಭದಲ್ಲಿ 10 ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಮೀಕ್ಷಾದಾರರಿಗೆ ಸೂಚನೆ ನೀಡಲಾಗಿತ್ತು.

ಆದರೆ ಆಯ್ಕೆ ಮಾಡಿಕೊಂಡ ಪ್ರದೇಶಗಳನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ನಿಯೋಜನೆ ಮಾಡಿದ್ದಾರೆ. ಮಹಿಳೆಯರಿಗಂತೂ ವಿಪರೀತ ತೊಂದರೆಯಾಗಿದೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡಿದ್ದಾರೆ.ವಿಶೇಷ ಚೇತರಿಗೆ, ವಿಶೇಷ ಚೇತನ ಮಕ್ಕಳನ್ನು ಹೊಂದಿರುವವರನ್ನು ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ

RELATED ARTICLES

Latest News