ಬೆಂಗಳೂರು,ಸೆ.21-ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ಸಕಲ ಸಿದ್ದತೆ ಮಾಡಿಕೊಳ್ಳ ಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಜಾತಿ ಗಣತಿ ಅಥವಾ ಜಾತಿ ಸಮೀಕ್ಷೆಯಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ರಾಜ್ಯದ ಎರಡು ಕೋಟಿ ಮನೆಗಳ ಜಿಯೋಟ್ಯಾಗಿಂಗ್ ಹಾಗೂ ಗಣತಿ ಬ್ಲಾಕ್‌ನ ನಕ್ಷೆ ಕಾರ್ಯ ಪೂರ್ಣಗೊಂಡಿದೆ. ಬ್ಲಾಕ್ ನಕ್ಷೆಯಲ್ಲಿ ಮನೆಗಳನ್ನು ಗುರುತಿಸುವ ಜೊತೆಗೆ ರಸ್ತೆಗಳನ್ನು ನಕ್ಷೆಗಳಲ್ಲಿ ನಮೂದಿಸಲಾಗಿದ್ದು, ಗಣತಿದಾರರು ಸಮೀಕ್ಷೆಗಾಗಿ ಮನೆ ಮನೆಗಳಿಗೆ ತಲುಪಲು ಅನುಕೂಲವಾಗಲಿದೆ. ಒಬ್ಬ ಸಮೀಕ್ಷಕರಿಗೆ 140ರಿಂದ 150 ಮನೆಗಳ ಬ್ಲಾಕ್‌ಗಳನ್ನು ಹಂಚಿಕೆ ಮಾಡಿ ಸಮೀಕ್ಷೆ ಕಾರ್ಯವನ್ನು ವಹಿಸಲಾಗಿದೆ. ಒಟ್ಟು 1.61 ಲಕ್ಷ ಬ್ಲಾಕ್‌ಗಳನ್ನು ಮಾಡಲಾಗಿದೆ ಎಂದರು.
ಸುಮಾರು 2 ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಸಮೀಕ್ಷೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಲಿದ್ದಾರೆ. ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ಮಾಡುತ್ತಾರೆ ಎಂದರು.
ಒಬ್ಬ ಸಮೀಕ್ಷಕರು ದಿನವೊಂದಕ್ಕೆ 7ರಿಂದ 8 ಮನೆ ಸಮೀಕ್ಷೆ ಮಾಡಿದರೂ 2 ಕೋಟಿ ಕುಟುಂಬಗಳನ್ನು 16 ದಿನಗಳಲ್ಲಿ ಮೊಬೈಲ್ ಆ್ಯಪ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶವುಳ್ಳ ಮೊಬೈಲ್ ಆ್ಯಪ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದರು.
ಸಮೀಕ್ಷಾದಾರರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷಾ ನಮೂನೆಯಲ್ಲಿ ಒಟ್ಟು 60 ಪ್ರಶ್ನೆಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಗಾಗುವುದನ್ನು ತಪ್ಪಿಸಲು 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಆಧಾರ ಸಂಖ್ಯೆಯನ್ನು ಒದಗಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರಚೀಟಿ ನಮೂದಿಸಿದರೆ ಅದರಲ್ಲಿರುವ ಮಾಹಿತಿಯೂ ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ ಎಂದು ವಿವರಿಸಿದರು.
ಮನೆಯಿಂದ ಹೊರಗಿರುವವರ ಮಾಹಿತಿಯನ್ನು ಪಡೆಯಲು ಆಧಾರ್ ಪರಿಶೀಲನೆ ಆನ್‌ಲೈನ್ ಸಮೀಕ್ಷೆ ನಡೆಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನಗತ್ಯ ವಿವಾದಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜಾತಿಗಳನ್ನು ಸೃಷ್ಟಿಸುವ ಕೆಲಸ ಆಯೋಗ ಮಾಡಿಲ್ಲ. ಅಸ್ತಿತ್ವದಲ್ಲಿವೆ ಎಂದು ಹೇಳಲಾದ ಜಾತಿಗಳನ್ನು ಸಮೀಕ್ಷಾದಾರರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್‌ನಲ್ಲಿ ಡ್ರಾಪ್‌ಡೌನ್‌ನಲ್ಲಿ ಪಟ್ಟಿ ಮಾಡಿ ಒದಗಿಸಲಾಗಿದೆ. ಇದು ಸಮೀಕ್ಷಾದಾರರ ಆಂತರಿಕ ಬಳಕೆಗೆ ಮಾತ್ರ. ಇದು ಸಾರ್ವಜನಿಕ ದಾಖಲೆಯಲ್ಲ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಗಳನ್ನು ಆಯೋಗವು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ ವಿವಿಧ ಜಾತಿ ಜನಾಂಗಗಳಿಗೆ ಒದಗಿಸಬಹುದಾದ ಅನುಕೂಲತೆಗಳ ಬಗ್ಗೆ ಶಿಫಾರಸಿನೊಂದಿಗೆ ಸಮೀಕ್ಷೆ ವರದಿ ಮಾಡಲಿದೆ ಎಂದರು.
ಸಮೀಕ್ಷೆ ಸಮಯದಲ್ಲಿ ಕೆವೈಸಿ ನಡೆಸುವಲ್ಲಿ ಎದುರಾಗುತ್ತಿದ್ದ ಅಡಚಣೆಗಳನ್ನು ಪರಿಹರಿಸಲು ಫೇಸ್ ರೆಕಗ್ನೇಷನ್ ಕಲ್ಪಿಸಲಾಗಿದೆ. ತಪ್ಪು ಗೊಂದಲಕ್ಕೆ ಒಳಗಾಗಿದ್ದ 33 ಜಾತಿಗಳ ಹೆಸರನ್ನು ಪಟ್ಟಿಯಿಂದ ನಿಷ್ಕ್ರಿಯಗೊಳಿಸಲಾಗಿದೆ. ಆದರೂ ಯಾವುದೇ ಜಾತಿಯ ಹೆಸರನ್ನು ಸ್ವಯಂ ಇಚ್ಛೆಯಿಂದ ನಮೂದಿಸಲು ಅವಕಾಶವಿದೆ. 148 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟು 1561(ಎಸ್ಸಿ-ಎಸ್ಟಿ ಹೊರತುಪಡಿಸಿ) ಜಾತಿಗಳಿವೆ.
ನಾವು ಯಾವುದೇ ಜಾತಿಯನ್ನು ಸೃಷ್ಟಿ ಮಾಡಿಲ್ಲ. ಮಾಹಿತಿಗಾಗಿ ಕುಟುಂಬದ ಧರ್ಮ, ಜಾತಿ, ಉಪಜಾತಿಗಳ ಮಾಹಿತಿ ಪಡೆಯಲಾಗುತ್ತಿದೆ. ಅಸ್ತಿತ್ವದಲ್ಲಿರುವ ಜಾತಿ, ಧರ್ಮಗಳಲ್ಲದೆ ತರ ಅಂಶಗಳನ್ನು ನಮೂದಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ್ ಉಪಸ್ಥಿತರಿದ್ದರು.