ನವದೆಹಲಿ,ಮಾ.8- ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡಿರುವ ಕರ್ನಾಟಕದ ಚಲನಚಿತ್ರ ನಟಿ ಹಾಗೂ ರಾಜ್ಯ ಪೊಲೀಸ್ ವಸತಿ ಮಂಡಳಿಯ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ರನ್ಯಾ ರಾವ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ) ನಿರ್ದೇಶನದ ಮೇರೆಗೆ ಸಿಬಿಐ ಇಂದು ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಮತ್ತಿತರ ಕಡೆ ರನ್ಯಾರಾವ್ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆ. ಇದೀಗ ಚಿತ್ರನಟಿ ವಿರುದ್ಧ ಡಿಆರ್ಐ ಸಮನ್ವಯದೊಂದಿಗೆ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇದು ಬರುವ ದಿನಗಳಲ್ಲಿ ರನ್ಯಾರಾವ್ಗೆ ಭಾರೀ ಕಾನೂನಿನ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಆರ್ಐ ತನಿಖೆ ವೇಳೆ ತಾನು ಕಳೆದ ವರ್ಷ ಒಟ್ಟು 30 ಬಾರಿ ದುಬೈಗೆ ತೆರಳಿದ್ದಾಗಿ ಹೇಳಿಕೆ ನೀಡಿದ್ದರು. ಅದರಲ್ಲೂ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ವಿದೇಶಿ ಪ್ರವಾಸ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರತಿಬಾರಿ ದುಬೈಗೆ ಪ್ರಯಾಣಿಸುತ್ತಿದ್ದ ವೇಳೆ ರನ್ಯಾ ರಾವ್ ಕೆಜಿಗಟ್ಟಲೇ ಚಿನ್ನವನ್ನು ತರುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ತಾನು ಕರ್ನಾಟಕದ ಪೊಲೀಸ್ ವಸತಿ ಮಂಡಳಿಯ ಡಿಜಿಪಿ ರಾಮಚಂದ್ರ ರಾವ್ ಅವರ ಪುತ್ರಿ ಎಂದು ದುಬೈಗೆ ಪ್ರೋಟೊಕಾಲ್ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರತಿ ಬಾರಿಯೂ ವಿದೇಶಕ್ಕೆ ತೆರಳುವ ವೇಳೆ ಓರ್ವ ಪೊಲೀಸ್ ಭದ್ರತೆಯಲ್ಲಿ ವಿಮಾನ ನಿಲ್ದಾಣದ ಗಣ್ಯರು ತೆರಳುವ ಸ್ಥಳಕ್ಕೆ ಬರುತ್ತಿದದ್ದು ಬೆಳಕಿಗೆ ಬಂದಿದೆ.
ವಿಮಾನ ನಿಲ್ದಾಣದ ವಲಸಿಗರ ವಿಭಾಗ ಅಧಿಕಾರಿಗಳು ಇದನ್ನು ಪತ್ತೆಹಚ್ಚಿದ್ದು, ಪ್ರತಿ ಬಾರಿ ದುಬೈನಿಂದ ಸ್ವದೇಶಕ್ಕೆ ಬರುವ ವೇಳೆ ಕನಿಷ್ಟ 4ರಿಂದ 5 ಕೆಜಿ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.
ಸಿಕ್ಕಿಬಿದ್ದ ನಟಿಯ ಬಳಿ 14ರಿಂದ 15 ಕೆಜಿ ಚಿನ್ನ ಇತ್ತು. ಇದರ ಬೆಲೆ ಅಂದಾಜು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 12 ಕೋಟಿ ಎಂದು ಅಂದಾಜಿಸಲಾಗಿದೆ. ಇದೀಗ ರನ್ಯಾರಾವ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಸಿಬಿಐ, ಅವರ ಪತಿ ಜತಿನ್ ಹುಕ್ಕೇರಿ ಅವರ ಮೇಲೂ ಕಣ್ಣಿಟ್ಟಿದೆ. ಪತಿಯ ಒಪ್ಪಿಗೆ ಇಲ್ಲದೆ ವಿದೇಶಕ್ಕೆ ತೆರಳಲು ಹೇಗೆ ಸಾಧ್ಯ ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ. ಬರುವ ದಿನಗಳಲ್ಲಿ ಅವರ ಪತಿಯನ್ನು ಡಿಆರ್ಐ ಮತ್ತು ಸಿಬಿಐ ಜೊಗೆ ಇಡಿ ಕೂಡ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರದ ಉನ್ನತ ಮೂಲಗಳು ಖಚಿತಪಡಿಸಿವೆ.
14.80 ಕೆಜಿ ಚಿನ್ನ ಪತ್ತೆ
ದುಬೈನಿಂದ ಮಾರ್ಚ್ 3ರ ರಾತ್ರಿ ಎಮಿರೇಟ್ಸ್ ಏರ್ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ ಅವರ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐಷಾರಾು ಫ್ಲಾಟ್ ಮೇಲೆ ದಾಳಿ ನಡೆಸಿದ ವೇಳೆ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಫ್ಲಾಟ್ಗೆ ನಟಿ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ಬಂಧನದ ನಂತರ ಕಂದಾಯ ಅಧಿಕಾರಿಗಳಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ ದುಬೈನಿಂದ 17 ಚಿನ್ನದ ಗಟ್ಟಿಗಳನ್ನು ತಂದಿದ್ದಾಗಿ ಒಪ್ಪಿಕೊಂಡಿದ್ದರು. ನಟಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆ ಸೋರಿಕೆಯಾಗಿದ್ದು, ಮಧ್ಯಪ್ರಾಚ್ಯ, ದುಬೈ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳನ್ನು ಒಳಗೊಂಡಂತೆ ತಮ ಅಂತಾರಾಷ್ಟ್ರೀಯ ಪ್ರವಾಸಗಳ ವಿವರಗಳು ಸಹ ಬಹಿರಂಗಗೊಂಡಿವೆ.
ಚಿನ್ನ ಸಾಗಾಣೆ ಮಾಡುವಂತೆ ಬ್ಲ್ಯಾಕ್ಮೇಲ್:
ಈ ಗೋಲ್‌್ಡ ಸಗ್ಲಿಂಗ್ ಕೇಸ್ನಲ್ಲಿ ದೊಡ್ಡ ಜಾಲವೇ ಇದೆ ಎನ್ನುವ ಅನುಮಾನ ಕೂಡ ಇದೆ. ಚಿನ್ನ ಕಳ್ಳ ಸಾಗಾಣೆ ಮಾಡುವಂತೆ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಲಾಯಿತು ಎಂದು ನಟಿ ರನ್ಯಾ ಹೇಳಿದ್ದಾರೆ ಎನ್ನಲಾಗಿದೆ. ನಟಿಗೆ ಬೆದರಿಕೆ ಹಾಕಿ ಈ ಕೆಲಸ ಮಾಡಿಸಿದ್ದು ಯಾರು? ಈ ಪ್ರಕರಣದ ಹಿಂದೆ ಇರುವ ಅಸಲಿ ಕೈ ಯಾವುದು? ಎಂಬಿತ್ಯಾದಿ ವಿಷಯಗಳ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿನ್ನ ಸಾಗಣೆ ಪ್ರಕರಣದಲ್ಲಿ ರನ್ಯಾ ಕೂಡ ಕಮೀಷನ್ ಪಡೆದಿದ್ದಾರೆ ಎನ್ನಲಾಗಿದೆ.