ಬೆಂಗಳೂರು,ಏ.15- ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಒಬ್ಬ ವಿದೇಶಿ ಪ್ರಜೆ ಹಾಗೂ 9 ಮಂದಿ ಕೇರಳ ರಾಜ್ಯದವರನ್ನು ಬಂಧಿಸಿ ನಗದು ಸೇರಿದಂತೆ 6.80 ಕೋಟಿ ಬೆಲೆಯ ಮಾದಕ ವಸ್ತುಗಳು, ಬೈಕ್ ಎರಡು ಕಾರುಗಳು, ಲ್ಯಾಪ್‍ಟಾಪ್ ಹಾಗೂ 12 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿವಿಲ್ ಎಂಜಿನಿಯರ್ ಸೆರೆ-ಕೇರಳ ರಾಜ್ಯದ ಸಿವಿಲ್ ಎಂಜಿನಿಯರ್‍ನ್ನು ಸಿಸಿಬಿ ಪೊಲೀಸರು ಬಂಧಿಸಿ ನಗದು ಸೇರಿದಂತೆ 4.25 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ 2 ನೇ ಹಂತದ ಡಿಮಾರ್ಟ್ ಹಿಂಭಾಗ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸ್ಥಳದ ಮೇಲೆ ದಾಳ ಮಾಡಿ ಕೇರಳ ಮೂಲದ ಡ್ರಗ್ ಪೆಡ್ನರನ್ನು ಬಂಧಿಸಿ ಒಂದು ಕೆಜಿ ಹೈಡೋಫೋನಿಕ್ ಗಾಂಜಾ ವಶಕ್ಕೆ ಪಡಿಸಿಕೊಂಡಿದ್ದಾರೆ.
ಆತನ ಮನೆ ಮೇಲೆ ದಾಳಿ ಮಾಡಿ 2 ಕೆಜಿ 554 ಗ್ರಾಂ ಹೈಡೋಫೋನಿಕ್ ಗಾಂಜಾ ಹಾಗೂ 26 ಲಕ್ಷ ನಗದು ಮತ್ತು ಒಂದು ಮೊಬೈಲ್ ಫೋನ್ ವರ ಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 4,52,54,500 ರೂ ಗಳೆಂದು ಅಂದಾಜಿಸಲಾಗಿದೆ.
ಆರೋಪಿಯು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಬೊಮ್ಮಸಂದ್ರದ ಅಪಾರ್ಟ್‌ಮೆಂಟ್ ವೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದಾನೆ.
ಕೇರಳದಿಂದ ಕಡಿಮೆ ಬೆಲೆಗೆ ಹೈಡೋಫೋನಿಕ್ ಗಾಂಜಾ ಖರಿದಿಸಿಕೊಂಡು ಬಂದು ಸ್ನೇಹಿತನೊಂದಿಗೆ ಸೇರಿಕೊಂಡು ಐಟಿ ಉದ್ಯೋಗಿಗಳು ಹೆಚ್ಚಾಗಿ ವಾಸವಿರುವ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕಡೆಗಳಲ್ಲಿ ಡ್ರಗ್ ಪೆಡ್ಡಿಂಗ್ ನಲ್ಲಿ ತೊಡಗಿಸಿಕೊಂಡಿರುವುದು ಹೆಚ್ಚಿನ ವಿಚಾರಣೆಯಿಂದ ಗೊತ್ತಾಗಿದೆ.
ಆರೋಪಿಯು ಡ್ರಗ್ ಪೆಡ್ಡಿಂಗ್ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಡಬಲ್ ಲೇಯರ್ ಏರ್ಟೈಟ್ ಪ್ಲಾಸ್ಟಿಕ್ ಕವರ್‌ಗಳಲ್ಲಿ 100 ಗ್ರಾಂ ನಂತೆ ಸಣ್ಣ ಸಣ್ಣ ಪ್ಯಾಕೇಟ್‍ಗಳನ್ನಾಗಿ ಮಾಡಿ ಬ್ಯಾಗ್‌ನಲ್ಲಿಟ್ಟುಕೊಂಡು ಸಾಫ್ಟ್‍ವೇರ್ ಉದ್ಯೋಗಿಯಂತೆ ಡ್ರಗ್ ಪೆಡ್ಡಿಂಗ್ ನಲ್ಲಿ ತೊಡಗಿದ್ದುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಒಂದು ಗ್ರಾಂ ಹೈಡೋಫೋನಿಕ್ ಗಾಂಜಾವನ್ನು 12 ಸಾವಿರದಂತೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದನು. ಈತನ ಮತ್ತೊಬ್ಬ ಸಹಚರ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.
ವಿದೇಶಿ ಪ್ರಜೆ ಸೆರೆ: ಡ್ರಗ್ ಪೆಡ್ರಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿ,2 ಕೋಟಿ ಮೌಲ್ಯದ 1 ಕೆ.ಜಿ ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಫೋನ್, ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರೆ.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡರ್ ಮಾದಕ ವಸ್ತು ಮಾರಾಟ, ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆತನನ್ನು ಬಂದಿಸಿ ವಿಚಾರಣೆಗೆ ಒಳ ಪಡಿಸಿದಾಗ ಆತನ ಬಳಿ ಯಾವುದೇ ಪಾಸ್‌ಪೋರ್ಟ್ ಇಲ್ಲದಿರುವುದು ಗೊತ್ತಗಿದೆ.
ಆರೋಪಿಯು 2012ನೇ ಸಾಲಿನಲ್ಲಿ ಬಿಜಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ನಗರದಲ್ಲಿ ನೆಲೆಸಿರುವ ಪರಿಚಯಸ್ಥನಿಂದ ಎಂಡಿಎಂಎ ಕ್ರಿಸ್ಟಲ್ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಗೊತ್ತಾಗಿದೆ. ಅಲ್ಲದೆ ಆರೋಪಿಯು ನಕಲಿ ದಾಖಲೆ ಸೃಷ್ಟಿಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ.
ಕೇರಳದ 8 ಮಂದಿ ಡ್ರಗ್‌ಪೆಡರ್ ಸೆರೆ ಲಾಡ್ಜ್ ವೊಂದರಲ್ಲಿ ನೆಲೆಸಿದ್ದ ಕೇರಳ ರಾಜ್ಯದ ಮಂದಿ ಡ್ರಗ್ ಪೆಡರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 27 ಲಕ್ಷ ಮೌಲ್ಯದ 110 ಗ್ರಾಂ ಎಂಡಿಎಂಎ ಕ್ರಿಸ್ಟಲ್, 10 ಮೊಬೈಲ್ ಫೋನ್ಗಳು, 1 ಟ್ಯಾಬ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 2 ಕಾರ್ಗಗಳನ್ನು ವಶಪಡಿಸಿಕೊಂಡಿದ್ದಾರೆ.
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟೂರು ಲೇಔಟ್ ನಲ್ಲಿರುವ ಲಾಡ್ಜ್ ವೊಂದರಲ್ಲಿ ಕೇರಳ ರಾಜ್ಯದ 8 ಡ್ರಗ್ ಪೆಡ್ಡರ್‌ಗಳು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಡ್ರಗ್ ಪೆಡ್ಡರ್‌ಗಳನ್ನು ವಿಚಾರಣೆ ಮಾಡಿದಾಗ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ನಗರದಲ್ಲಿ ನೆಲೆಸಿರುವ ವಿದೇಶಿ ಡ್ರಗ್ ಪೆಡ್ನರ್‌ಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿ ಮಾಡಿ, ಕಾಲೇಜು ದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಗೊತ್ತಾಗಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.