ಬೆಂಗಳೂರು, ಅ.18- ಭಾರತೀಯ ಅಂಚೆ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ನಗರಕ್ಕೆ ಸರಬರಾಜು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 21.17 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಬಿ ತಂಡವು ಭಾರತೀಯ ಅಂಚೆ ಮೂಲಕ ವಿವಿಧ ವಿದೇಶಗಳಿಂದ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿತ್ತು. ಈ ವರ್ಷದಲ್ಲಿ 12 ಪ್ರಕರಣಗಳನ್ನು ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ಕಳೆದ ತಿಂಗಳು ನಗರದ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಇಂತಹದ್ದೇ ಎರಡು ಪ್ರಕರಣಗಳು ಮತ್ತು ಸಿಸಿಬಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿದ್ದು ಈ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು.
ನಿಷೇಧ ಮಾದಕ ವಸ್ತುವನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತೊಗೆಯಲು ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಾಮರಾಜಪೇಟೆಯ ಫಾರೀನ್ ಪೋಸ್ಟ್ ಆಫೀಸ್ನಲ್ಲಿ ಕಸ್ಟಮ್ಸೌ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದರು.
ಕಾರ್ಯಾಚರಣೆ ವೇಳೆ ಯುಎಸ್ಎ, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರ್ಲ್ಯಾಂಡ್ ಹಾಗೂ ಇತರೇ ದೇಶಗಳಿಂದ ನಗರಕ್ಕೆ ತರಿಸಿಕೊಂಡಿದ್ದ ಸುಮಾರು 3.500 ಅನುಮಾನಾಸ್ಪದ ಪಾರ್ಸಲ್ಗಳನ್ನು ಶ್ವಾನದಳ ಸಹಾಯದಿಂದ ಪರಿಶೀಲಿಸಿದಾಗ 606 ಪಾರ್ಸಲ್ಗಳಲ್ಲಿ ಮಾದಕ ವಸ್ತು ಇರುವುದು ಖಚಿತವಾದ್ದರಿಂದ ಸಿಸಿಬಿಯ ಮಾದಕದ್ರವ್ಯ ನಿಗ್ರಹದಳದಲ್ಲಿ ಪ್ರಕರಣಗಳನ್ನು ದಾಖಲೆ ಮಾಡಿಕೊಂಡು ತನಿಖೆ ಕೈಗೊಂಡಿದ್ದರು.
ತನಿಖೆ ವೇಳೆ 606 ಪಾರ್ಸಲ್ಗಳಲ್ಲಿದ್ದ ಅಂದಾಜು 21.17 ಕೋಟಿ ಮೌಲ್ಯದ ನಿಷೇಧಿತ 28 ಕೆಜಿ ಹೈಡ್ರೋಗಾಂಜಾ, 2.569 ಎಲ್ಎಸ್ಡಿ, 1 ಕೆಜಿ 618 ಗ್ರಾಂ ಎಂಡಿಎಂ ಕ್ರಿಸ್ಟೇಲ್, 11.908 ಎಕ್‌್ಸಟೆಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್, 102 ಗ್ರಾಂ ಕೊಕೈನ್, 6 ಕೆಜಿ ಆಮ್ಫೀಟಮೈನ್, 336 ಗ್ರಾಂ ಚರಸ್, 1 ಕೆಜಿ ಗಾಂಜಾಎಣ್ಣೆ, 445 ಗ್ರಾಂ ಮ್ಯಾಥಾಕ್ಲಿನಾ, 11 ಇ-ಸಿಗರೇಟ್, 102 ಎಂಎಲ್ ನಿಕೋಟಿನ್, 400 ಗ್ರಾಂ ಟೊಬ್ಯಾಕೋ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
606 ಪಾರ್ಸಲ್ಗಳಲ್ಲಿದ್ದ ಮಾದಕ ವಸ್ತುಗಳನ್ನು ಯಾವ ಯಾವ ದೇಶಗಳಿಂದ ತರಿಸಿಕೊಳ್ಳಲಾಗಿದೆ. ಯಾರ್ಯಾರು ತರಿಸಿಕೊಂಡಿದ್ದಾರೆಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳು ಭಾರತೀಯ ಅಂಚೆ ಮೂಲಕ ವಿವಿಧ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ನಗರಕ್ಕೆ ತರಸಿಕೊಂಡು ಹೆಚ್ಚಿನ ಬೆಲೆಗೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗುತ್ತಿದ್ದರೆಂಬ ಮಾಹಿತಿ ಇದ್ದು ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.