Tuesday, December 3, 2024
Homeಬೆಂಗಳೂರುನಕಲಿ ವಿದೇಶಿ ಚಾಕಲೇಟ್‌ ಜಾಲ ಬೇಧಿಸಿದ ಸಿಸಿಬಿ ಪೊಲೀಸರು

ನಕಲಿ ವಿದೇಶಿ ಚಾಕಲೇಟ್‌ ಜಾಲ ಬೇಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು,ಜು.10- ವಿದೇಶಿ ಚಾಕಲೇಟ್‌ಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌‍ಎಸ್‌‍ಎಐ) ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಒಂದು ಕೋಟಿ ರೂ. ಮೌಲ್ಯದ ವಿದೇಶಿ ಕಂಪನಿಗಳ ವಿವಿಧ ಚಾಕಲೇಟ್‌ ಹಾಗೂ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ.

ಕಲಾಸಿಪಾಳ್ಯ ಪೊಲೀಸ್‌‍ ಠಾಣೆ ಸರಹದ್ದಿನ ಸುಧಾಮನಗರದ ನಾರಾಯಣಸ್ವಾಮಿ ಲೇಔಟ್‌ ಗೋಡೋನ್‌ನಲ್ಲಿ ಆರೋಪಿ ಚಾಕಲೇಟ್‌, ಬಿಸ್ಕಟ್‌, ಪಾನೀಯಗಳು ಹಾಗೂ ಇತರೆ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ವಿದೇಶದಿಂದ ಆಮದು ಮಾಡಿಕೊಂಡು ಅನಧಿಕೃತವಾಗಿ ಎಫ್‌ಎಸ್‌‍ಎಸ್‌‍ಎಐ ಸ್ಟಿಕರ್‌ಗಳನ್ನು ಅಂಟಿಸಿ ನಗರದ ಹಲವಾರು ಸೂಪರ್‌ ಮಾರ್ಕೆಟ್‌ ಮತ್ತು ಮಾಲ್‌ಗಳಲ್ಲಿ ಸರಬರಾಜು ಮಾಡುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಗೋಡೋನ್‌ ಮೇಲೆ ದಾಳಿ ನಡೆಸಿ ಈ ದಂಧೆಯನ್ನು ಬಯಲಿಗೆಳೆದಿದ್ದಾರೆ. ಈ ಚಾಕಲೇಟ್‌ಗಳು ಭಾರತ ದೇಶದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮಗಳನುಸಾರ ತಯಾರಿಸದೆ ಇರುವುದು ಕಂಡುಬಂದಿದ್ದು, ಆಹಾರ ಇಲಾಖೆಯ ಉಪನಿರ್ದೇಶಕರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ನಕಲಿ ಸ್ಟಿಕರ್‌ಗಳನ್ನು ಅಂಟಿಸಿ ತಮಗೆ ಇಷ್ಟಬಂದ ದರವನ್ನು ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿತ್ತು. ಈ ವಸ್ತುಗಳನ್ನು ವಿದೇಶದಿಂದ ಭಾರತಕ್ಕೆ ಯಾವುದೇ ದಾಖಲೆ ಇಲ್ಲದೆ ತಂದಿರುವುದು ಕೂಡ ಪ್ರಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News