Friday, January 31, 2025
Homeರಾಜ್ಯ75 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ

75 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ

ಬೆಂಗಳೂರು,ಜ.28- ಗಡಿಪಾರು ಆದೇಶ ಉಲ್ಲಂಘಿಸಿ ನಗರದಲ್ಲಿ ನೆಲೆಸಿದ್ದ ರೌಡಿ ಸೇರಿದಂತೆ 75 ರೌಡಿಗಳ ಮನೆಗಳ ಮೇಲೆ ಕಳೆದೆರಡು ವಾರದಿಂದ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಕಾರ್ಯಾಚರಣೆ ಕೈಗೊಂಡು ಕೆಲವು ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಸಿಸಿಬಿ ಪೊಲೀಸರು ಕಳೆದ 15 ದಿನಗಳಿಂದ, ಮುಂಜಾನೆ ವೇಳೆಯಲ್ಲಿ ಬೆಂಗಳೂರಿನ ಪೂರ್ವ, ಈಶಾನ್ಯ, ಆಗ್ನೇಯ ಮತ್ತು ವೈಟ್‌ಫೀಲ್‌್ಡ ಭಾಗಗಳಲ್ಲಿನ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದು, ಒಟ್ಟು 75 ರೌಡಿ ಮನೆಗಳನ್ನು ಶೋಧನೆ ಮಾಡಿ, 7 ರೌಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ರೌಡಿಗಳ ಮನೆಗಳನ್ನು ಶೋಧನೆ ಮಾಡಿದ ಸಮಯದಲ್ಲಿ ಪೂರ್ವ ವಿಭಾಗದ ಡಿ.ಜೆ ಹಳ್ಳಿ ರೌಡಿಗೆ ಆಂಧ್ರಪ್ರದೇಶದ ಹಿಂದೂಪುರಕ್ಕೆ ಗಡಿಪಾರು ಆದೇಶವಾಗಿದ್ದರೂ ಆದೇಶ ಉಲ್ಲಂಘನೆ ಮಾಡಿ, ಡಿ ಜೆ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ವಾಸವಾಗಿರುವುದು ಕಂಡುಬಂದಿದೆ. ಈ ರೌಡಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಡಿ ಜೆ ಹಳ್ಳಿ ಪೊಲೀಸ್‌‍ ಠಾಣೆಗೆ ವರದಿ ನೀಡಲಾಗಿದೆ.


ಆಗ್ನೇಯ ವಿಭಾಗದ ರೌಡಿಗಳ ಮನೆಗಳನ್ನು ಶೋಧನೆ ಮಾಡಿದಾಗ ಗಿರಿನಗರ ಪೊಲೀಸ್‌‍ ಠಾಣೆಯ ರೌಡಿ ವಿರುದ್ದ ನ್ಯಾಯಾಲಯವು ಎನ್‌.ಬಿ.ಡಬ್ಲ್ಯೂ ವಾರೆಂಟ್‌ ಮತ್ತು ಪೊಕ್ಲಮೇಷನ್‌ಗಳನ್ನು ಹೊರಡಿಸಿದ್ದು, ಈತನ ಬಗ್ಗೆ ಮಾತಿಯನ್ನು ಕಲೆಹಾಕಿ, ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ವಶಕ್ಕೆ ಪಡೆದು ಠಾಣೆಗೆ ವರದಿಯೊಂದಿಗೆ ಹಾಜರುಪಡಿಸಲಾಗಿದೆ. ಈಶಾನ್ಯ ಭಾಗದಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದಾಗ ಕೊಡಿಗೇಹಳ್ಳಿ ಪೊಲೀಸ್‌‍ ಠಾಣೆಯ ರೌಡಿ ವಿರುದ್ದ ನ್ಯಾಯಾಲಯವು 3 ಪ್ರಕರಣಗಳಲ್ಲಿ ಎನ್‌.ಬಿ.ಡಬ್ಲ್ಯೂ ವಾರೆಂಟ್‌ ಹೊರಡಿಸಿದ್ದು, ಈತನು ವಾಸವಿರುವ ಸಂಜಯನಗರದ ನಾಗಶೆಟ್ಟಿಹಳ್ಳಿಯಲ್ಲಿ ವಶಕ್ಕೆ ಪಡೆದು, ಠಾಣೆಗೆ ಒಪ್ಪಿಸಲಾಗಿದೆ.

ಕೊಡಿಗೇಹಳ್ಳಿ ಪೊಲೀಸ್‌‍ ಠಾಣೆಯ ಮತ್ತೊರ್ವ ರೌಡಿ ವಿರುದ್ದ ನ್ಯಾಯಾಲಯವು 2 ಪ್ರಕರಣಗಳಲ್ಲಿ ಎನ್‌.ಬಿ.ಡಬ್ಲ್ಯೂ ವಾರೆಂಟ್‌ ಹೊರಡಿಸಿದ್ದು, ಈತನನ್ನು ಕೊಡಿಗೇಹಳ್ಳಿ ಭದ್ರಪ್ಪ ಲೇಔಟ್‌ನಲ್ಲಿರುವ ಮನೆಯಿಂದ ವಶಕ್ಕೆ ಪಡೆದು, ಠಾಣೆಗೆ ಹಾಜರುಪಡಿಸಲಾಗಿದೆ. ಯಲಹಂಕ ನ್ಯೂ ಟೌನ್‌ ಪೊಲೀಸ್‌‍ ಠಾಣೆಯ ರೌಡಿ ವಿರುದ್ದ ದಾಖಲಾಗಿದ್ದ 5 ಪ್ರಕರಣಗಳಲ್ಲಿ ಎನ್‌.ಬಿ.ಡಬ್ಲ್ಯೂ ವಾರೆಂಟ್‌ ಹೊರಡಿಸಿದ್ದು, ಈತನನ್ನು ನೆಲಮಂಗಲ ತಾಲ್ಲೂಕು ಗೆದ್ದಲಹಳ್ಳ ಗ್ರಾಮದಿಂದ ವಶಕ್ಕೆ ಪಡೆದು, ಯಲಹಂಕ ನ್ಯೂ ಟೌನ್‌ ಪೊಲೀಸರ ವಶಕ್ಕೆ ನೀಡಲಾಗಿದೆ.

ವಿಲ್ಸನ್‌ಗಾರ್ಡ್‌ನ್‌ ಪೊಲೀಸ್‌‍ ಠಾಣೆಯ ರೌಡಿಯು ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಶಾಂತಿ ಹಾಗೂ ನೆಮದಿಗೆ ಭಂಗವನ್ನುಂಟು ಮಾಡುವ ಸಂಭವವಿದ್ದುದ್ದರಿಂದ ಮುಂಜಾಗ್ರತಾ ಕ್ರಮವಾಗಿ, ಈತನ ವಿರುದ್ಧ ಕ್ರಮ ಜರುಗಿಸಲು ವಿಲ್ಸನ್‌ಗಾರ್ಡ್‌ನ್‌ ಪೊಲೀಸ್‌‍ ಠಾಣೆಗೆ ಹಾಜರುಪಡಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌‍ ಠಾಣೆಯ ರೌಡಿಯೊಬ್ಬ ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಶಾಂತಿ ಹಾಗೂ ನೆಮದಿಗೆ ಭಂಗವನ್ನುಂಟು ಮಾಡುವ ಸಂಭವವಿದ್ದುದ್ದರಿಂದ ಮುಂಜಾಗ್ರತಾ ಕ್ರಮವಾಗಿ, ಈತನ ವಿರುದ್ಧ ಕ್ರಮ ಜರುಗಿಸಲು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌‍ ಠಾಣೆಗೆ ಒಪ್ಪಿಸಲಾಗಿದೆ.

ಈ ವಿಶೇಷ ಕಾರ್ಯಾಚರಣೆಯನ್ನು ನಗರ ಅಪರ ಪೊಲೀಸ್‌‍ ಆಯುಕ್ತರ ಮಾರ್ಗದರ್ಶನದಂತೆ, ಉಪ ಪೊಲೀಸ್‌‍ ಆಯುಕ್ತರು, ಅಪರಾಧ-1 ರವರ ನೇತೃತ್ವದಲ್ಲಿ, ಸಿಸಿಬಿ ಘಟಕದ ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕೈಗೊಂಡಿತ್ತು.

RELATED ARTICLES

Latest News