ಬೆಂಗಳೂರು, ಅ.28- ನಗರ ವ್ಯಾಪ್ತಿಯ ಎಲ್ಲಾ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರ ಅಳವಡಿಸಿರಬೇಕು. ಸಿಸಿ ಕ್ಯಾಮೆರಾ ಅಳವಡಿಸದ ಮಾಲೀಕರಿಗೆ ದಂಡ ವಿಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ 100ಕ್ಕೂ ಹೆಚ್ಚು ಸಾರ್ವಜನಿಕರು ಬರುವ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರ ಅಳವಡಿಸಬೇಕು ಎಂದು ನಿಯಮವಿದೆ. ಸಿಸಿ ಕ್ಯಾಮೆರಾಗಳನ್ನೂ ಪೋಲೀಸರ ಮಾರ್ಗದರ್ಶನದಲ್ಲಿ ಅಳವಡಿಸಬೇಕು ಎಂದು ಹೇಳಿದರು.
ರಸ್ತೆ ಸುತ್ತಮುತ್ತಲಿನ ಪ್ರದೇಶಗಳು ಕಾಣುವಂತೆ, ಸಿಸಿ ಕ್ಯಾಮೆರಾ ಅಳವಡಿಸಬೇಕು ಅವುಗಳು ಹೆಚ್ಚು ಕ್ವಾಲಿಟಿ ಇರಬೇಕು, ಸ್ಟೋರೇಜ್ ಹೆಚ್ಚಾಗಿ ಇರಬೇಕು, ಕ್ಯಾಮೆರಾ ಯಾವಕಡೆ ಇರಬೇಕು, ನಿರ್ವಹಣೆ ಮಾಡುವುದರ ಬಗ್ಗೆ ಪೋಲೀಸರು ಸಲಹೆ ನೀಡುತ್ತಾರೆ. ಒಂದು ಸಿಸಿ ಟಿವಿ, ಒಬ್ಬರು ಪೋಲೀಸ್ ರೀತಿ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ರಸ್ತೆಗಳಲ್ಲಿ ವಾಹನ ನಿಲುಗಡೆ, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಹೋಟೆಲ್, ರೆಸ್ಟೋರೆಂಟ್‍ಗಳ ಬಗ್ಗೆ ಸಾಕಷ್ಟು ದೂರು ಹೇಳಿದರು. ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲು ಸ್ಥಳೀಯ ಪೋಲೀಸರಿಗೆ ಆಯುಕ್ತರು ಆದೇಶಿಸಿದರು.
ಪಾಕ್ ವಿರುದ್ಧ ಗೆದ್ದು ‘ಜೈ ಹನುಮಾನ್’ ಎಂದ ದಕ್ಷಿಣ ಆಫ್ರಿಕಾ ಆಟಗಾರ
ಇನ್ನು ಬೇಕರಿಗಳ ಬಗ್ಗೆ ಬಹಳಷ್ಟು ದೂರುಗಳು ಕೇಳಿ ಬಂದಿದ್ದು, ಬೇಕರಿ ಬಳಿ ಧೂಮಪಾನ ಮಾಡುವುದು, ಪಡ್ಡೆ ಹುಡುಗರು ಅಲ್ಲಿ ತಮ್ಮ ಅಡ್ಡ ಮಾಡಿಕೊಂಡು ಹೆಣ್ಣುಮಕ್ಕಳಿಗೆ ಚುಡಾಯಿಸುವ ಚಾಳಿ ಹೆಚ್ಚಾಗಿದೆ ಎಂದು ಆಯುಕ್ತರ ಮುಂದೆ ಸಾರ್ವಜನಿಕರು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ದಯಾನಂದ ಅವರು ಈ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿದ್ದು, ಬೇಕರಿಗಳ ಬಳಿ ಧೂಮಪಾನ ನಿಷೇಧಿಸಲಾಗಿದೆ. ಎಲ್ಲಾ ಬೇಕರಿಗಳ ಬಳಿ ಧೂಮಪಾನ ನಿಷೇಧ ಬೊರ್ಡ್ ಅಳವಡಿಸುವಂತೆ ಬೇಕರಿ ಮಾಲೀಕರಿಗೆ ಸೂಚಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದರು. ಮಾದಕ ವಸ್ತು ಜಾಲದ ಬಗ್ಗೆ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ತಿಂಗಳ ಕೊನೆಯ ದಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಡ್ರಗ್ಸ್ ಜಾಲದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆಂದು ಆಯುಕ್ತರು ತಿಳಿಸಿದರು.