ನವದೆಹಲಿ, ಮಾ.8- ಮತದಾರರ ಪಟ್ಟಿಯ ಪ್ರಾಮಾಣಿಕತೆ ಬಗ್ಗೆ ವಿರೋಧ ಪಕ್ಷದ ನಾಯಕರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಚುನಾವಣಾ ಆಯೋಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಮುಂದಿನ ಮೂರು ತಿಂಗಳಲ್ಲಿ ನಕಲಿ ಮತದಾರರ ಗುರುತಿನಚೀಟಿ ಸಂಖ್ಯೆಗಳ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದೆ.
ಹಲವು ಜನ ಒಂದೇ ಚುನಾವಣಾ ಫೋಟೋ ಗುರುತಿನ ಚೀಟಿ ಸಂಖ್ಯೆಯನ್ನು ಹೊಂದಿರುವ ಸಾಧ್ಯತೆ ಇದೆ ಎನ್ನುವುದನ್ನು ಚುನಾವಣಾ ಆಯೋಗ ಒಪ್ಪಿಕೊಂಡಿತ್ತು. ಆದರೆ ವಿವಿಧ ರಾಜ್ಯಗಳು ಒಂದೇ ಸಂಖ್ಯಾಸರಣಿಯನ್ನು ಬಳಕೆ ಮಾಡಿರುವುದು ನಕಲು ಮತದಾರರನ್ನು ಸೂಚಿಸುವುದಿಲ್ಲ ಎಂದು ತಿಳಿಸಿತ್ತು.
ಮತದಾರರ ಪಟ್ಟಿ ತಿದ್ದುಪಡಿಯಲ್ಲಿ ಚುನಾವಣಾ ಆಯೋಗ ಭಾಗಿಯಾಗಿದೆ ಎಂದು ಆರೋಪಿಸಿದ ಬಳಿಕ ಟಿಎಂಸಿ ಕಾಂಗ್ರೆಸ್, ಒಂದೇ ರಾಜ್ಯದಲ್ಲಿ ಹಲವು ಮತದಾರರು ಒಂದೇ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಬಳಸಿದ ಪ್ರಕರಣಗಳು ವರದಿಯಾಗಿವೆ ಎಂದು ಆರೋಪಿಸಿದೆ.
ಚುನಾವಣಾ ಸಮಿತಿ ಮುಂದಿನ ಮೂರು ತಿಂಗಳಲ್ಲಿ ನಕಲಿ ಎಪಿಕ್ ಸಂಖ್ಯೆಯನ್ನು ಹೊಂದಿರುವ ಅಸ್ತಿತ್ವದಲ್ಲಿರುವ ಮತದಾರರಿಗೆ ಶಿಷ್ಟ ರಾಯ ಎಪಿಕ್ ಸಂಖ್ಯೆಯನ್ನು ನೀಡುವ ಮೂಲಕ ದೀರ್ಘಕಾಲದವರೆಗೆ ಬಾಕಿ ಇರುವ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದು, ಈ ಹೊಸ ವ್ಯವಸ್ಥೆಯು ಮುಂದಿನ ಮತದಾರರಿಗೂ ಅನ್ವಯವಾಗಲಿದೆ ಎಂದು ತಿಳಿಸಿದೆ.
ಟೆಕ್ನಿಕಲ್ ತಂಡಗಳು ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಸಮಿತಿ ತಿಳಿಸಿದ್ದು, ಎಪಿಕ್ ಸಂಖ್ಯೆಯನ್ನು ಲೆಕ್ಕಿಸದೆ, ಒಂದು ನಿರ್ದಿಷ್ಟ ಮತಗಟ್ಟೆಯ ಮತದಾರರ ಪಟ್ಟಿಗೆ ಲಿಂಕ್ ಮಾಡಲಾದ ಮತದಾರರು ಆ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಲು ಅವಕಾಶ ಇರುತ್ತದೆ. ಬೇರೆ ಕಡೆ ಮತ ಹಾಕಲು ಅವಕಾಶ ಇರುವುದಿಲ್ಲ ಎಂದು ಹೇಳಿದೆ.
2000ನೇ ಇಸಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಪಿಕ್ ಸರಣಿಯನ್ನು ಹಂಚಿಕೆ ಮಾಡಿದಾಗಿನಿಂದ, ಕೆಲವು ಪ್ರಾದೇಶಿಕ ಚುನಾವಣಾ ಅಧಿಕಾರಿಗಳು ಸರಿಯಾದ ಸರಣಿಯನ್ನು ಬಳಸಲಿಲ್ಲ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ವತಂತ್ರವಾಗಿ ಮತದಾರರ ಪಟ್ಟಿಯ ಅಂಕಿ ಅಂಶಗಳನ್ನು ನಿರ್ವಸುತ್ತಿದ್ದರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತಪ್ಪಾದ ಸರಣಿಗಳನ್ನು ಬಳಕೆ ಮಾಡಿದ್ದರಿಂದ ನಕಲಿ ಸಂಖ್ಯೆಗಳ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ನಕಲಿ ಮತದಾರರನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಚುನಾವಣಾ ಆಯೋಗದ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.