ಬೆಂಗಳೂರು,ಜು.23- ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಹಿಂದೆಂದಿಗಿಂತಲೂ ಮಲತಾಯಿ ಧೋರಣೆ ಅನುಸರಿಸಲಾಗಿದ್ದು, ಈ ಬಾರಿ ಹೊಸದಾಗಿ ಒಂದೇ ಒಂದು ಯೋಜನೆಗಳನ್ನು ರಾಜ್ಯಕ್ಕೆ ನೀಡಿಲ್ಲ. ಕೇವಲ ಬೆಂಗಳೂರು-ಹೈದರಾಬಾದ್ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದನ್ನು ಹೊರತುಪಡಿಸಿದರೆ ರಾಜ್ಯಕ್ಕೆ ನೆನೆಗುದಿಗೆ ಬಿದ್ದಿರುವ ಯಾವುದೇ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ.
ಈ ಬಾರಿಯ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಯೋಜನೆಗಳನ್ನು ಪ್ರಧಾನಿ ನರೇಂದ್ರಮೋದಿ ಸರ್ಕಾರ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಂದರೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ವಿಎಸ್‍ಐಎಲ್ ಕಾರ್ಖಾನೆ ಪುನರಾರಂಭಕ್ಕೆ ವಿಶೇಷ ಪ್ಯಾಕೇಜ್, ಭದ್ರ ಮೇಲ್ದಂಡೆ ಯೋಜನೆ ಅನುಷ್ಠಾನ, ಮೇಕೆದಾಟು, ಕಳಸಾ ಬಂಡೂರಿ, ರೈಲ್ವೆ, ನೀರಾವರಿ ಸೇರಿದಂತೆ ಹಲವಾರು ಯೋಜನೆಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ತನ್ನ ಮಿತ್ರ ಪಕ್ಷಗಳನ್ನು ಓಲೈಕೆ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದ ಕೇಂದ್ರ ಸರ್ಕಾರ, ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದಡಿ ಹಣಕಾಸಿನ ನೆರವು ನೀಡಿದೆ. ತನ್ನ ಪಕ್ಷವೇ ಆಡಳಿತದಲ್ಲಿರುವ ಇಲ್ಲವೇ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ಯಾವುದೇ ರಾಜ್ಯಗಳಿಗೆ ಹೊಸ ಯೋಜನೆಗಳನ್ನು ಘೋಷಿಸಿಲ್ಲ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ 19 ಸ್ಥಾನಗಳನ್ನು ಗೆದ್ದಿದ್ದರಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿದ್ದರೂ ಕಡೆಪಕ್ಷ ಒಂದಿಷ್ಟು ಹೊಸ ಯೋಜನೆಗಳು ಸಿಗಲಿವೆ ಎಂಬ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ. ಬೆಳೆಯುತ್ತಿರುವ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಬರ್ಬನ್ ರೈಲು, ಮೆಟ್ರೊ ರೈಲು ವಿಸ್ತರಣೆ, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಭಾಗಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮೇಕೆದಾಟು ಯೋಜನೆಗೆ ಅನುದಾನ ನೀಡಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ.
ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಮತ್ತು ರಾಜ್ಯವನ್ನು ಪ್ರತಿನಿ„ಸುವ ಸಂಸದರನ್ನು ಭೇಟಿಯಾಗಿದ್ದರು. ಸಾಲದಕ್ಕೆ ಪ್ರಧಾನಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಭೇಟಿಯಾಗಿ ರಾಜ್ಯದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಅನುದಾನ ನೀಡಬೇಕೆಂದು ಮನವಿ ಮಾಡಿದ ಪ್ರಸ್ತಾವನೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಸಿಡಿದೆದ್ದ ಕನ್ನಡಿಗರು:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಲೋಕಸಭೆಯಲ್ಲಿ ಮಾತ್ರವಲ್ಲ, ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲೂ ಭಿನ್ನ ದನಿ ಕೇಳಿ ಬಂತು. ಅದರಲ್ಲೂ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಮೋದಿ ಸರ್ಕಾರದ ಬಜೆಟ್‍ನಲ್ಲಿ ಸಾಲು ಸಾಲು ಯೋಜನೆಗಳು, ಲಕ್ಷ ಕೋಟಿ ಮೊತ್ತದ ಅನುದಾನಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ನೆಟ್ಟಿಗರು ರೊಚ್ಚಿಗೆದಿದ್ದಾರೆ.
ಆಂಧ್ರ, ಬಿಹಾರಕ್ಕೆ ಮಣೆ ಏಕೆ?:
ಬಿಜೆಪಿ ಸಾರಥ್ಯದ ಎನ್‍ಡಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ಜೆಡಿಯು ಹಾಗೂ ಟಿಡಿಪಿ ಪಕ್ಷಗಳು ಲೋಕಸಭೆಯಲ್ಲಿ ನಿರ್ಣಾಯಕ ಸಂಖ್ಯಾ ಬಲ ಹೊಂದಿವೆ. ಈ ಪಕ್ಷಗಳು ತಮ್ಮ ಬೆಂಬಲ ವಾಪಸ್ ಪಡೆದರೆ ಸರ್ಕಾರವೇ ಬಿದ್ದು ಹೋಗುತ್ತದೆ. ಹೀಗಾಗಿ, ಟಿಡಿಪಿ ನಾಯಕ, ಆಂಧ್ರ ಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಹಾಗೂ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನ ಮೆಚ್ಚಿಸಲು ಮೋದಿ ಸರ್ಕಾರ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಭಾರೀ ಅನುದಾನ ನೀಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಐತ-ಪಿಂಚಲು ಹೆಸರಿನ -ಫೆಸ್‍ಬುಕ್‍ನಲ್ಲಿ, ಕರ್ನಾಟಕಕ್ಕೆ ಮೂರು ನಾಮ ಹಾಕಲಾಗಿದೆ ಎಂದು ಬಿಂಬಿಸುವ ಪೋಸ್ಟ್ ಮಾಡಿದ್ದು, ಏನ್ರಪ್ಪಾ ಈ ಸಲ ಬಜೆಟ್ ಕೇವಲ ಆಂಧ್ರ ಮತ್ತು ಬಿಹಾರಕ್ಕೆ ಸೀಮಿತವೇ? ಕರ್ನಾಟಕಕ್ಕೆ ಏನೂ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಹಾಗೆ ನೋಡಿದರೆ ಕೇಂದ್ರ ಬಜೆಟ್‍ಗೆ ಮುನ್ನವೇ ಆಂಧ್ರ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಿಲ್ಲ ಎಂದು ಮೋದಿ ಸರ್ಕಾರ ಹೇಳಿತ್ತು. ಆದರೆ ಬಜೆಟ್‍ನಲ್ಲಿ ಘೋಷಣೆ ಮಾಡಲಾದ ಯೋಜನೆಗಳ ಪೈಕಿ ಬಹುಪಾಲು ಯೋಜನೆಗಳು ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯದ ಕಡೆಗೇ ಹೋಗಿವೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬೆಂಗಳೂರು – ಹೈದರಾಬಾದ್ ನಡುವಣ ಹೆದ್ದಾರಿ ಅಭಿವೃದ್ದಿಯ ಪ್ರಸ್ತಾಪವಾಗಿದೆ. ಇನ್ನುಳಿದಂತೆ ಯಾವುದೂ ಮೇಲ್ನೋಟಕ್ಕೆ ಕಾಣದಿರೋದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪತ್ರಕರ್ತೆ ಸ್ಮಿತಾ ಪ್ರಕಾಶ್ ಅವರಂತೂ ಏನನ್ನೂ ಹೇಳದೆ ಕೇವಲ ಒಂದು -ಫೋಟೋ ಪ್ರಕಟಿಸಿ ಬಜೆಟ್ ಎಂದು ಬರೆದಿದ್ದಾರೆ. ಈ ಫೋಟೋದಲ್ಲಿ ಮೋದಿ ಅವರಿಗೆ ನಾಯ್ಡು ಹಾಗೂ ನಿತೀಶ್ ಕೈ ಮುಗಿಯುವ ಚಿತ್ರಣವಿದೆ!
ಗಬ್ಬರ್ ಎಂಬುವರು ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ದೇಶದ ಷೇರು ಮಾರುಕಟ್ಟೆಯ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಬಿಂಬಿಸಿದ್ದಾರೆ.
ಇನ್ನು ಸಂಬಳದಾರರು ಪ್ರತಿ ಬಜೆಟ್‍ನಲ್ಲೂ ಪಂಚಾಯತ್ ವೆಬ್ ಸಿರೀಸ್ ಗ್ರಾಮಸ್ಥರ ರೀತಿ ಅನುದಾನ ಕೇಳುವಂತೆ ಆಗುತ್ತಿದೆ ಎಂದು ಕೆಲವು ನೆಟ್ಟಿಗರು ಲೇವಡಿ ಮಾಡಿದ್ದಾರೆ.ಮುಕೇಶ್ ಅಂಬಾನಿ ಅವರು ತಮ್ಮ ಮಗನ ಮದುವೆಯಲ್ಲಿ ಜನರಿಗೆ ಊಟಕ್ಕೆ ಬಡಿಸುವ ರೀತಿಯಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರ ಜೊತೆ ನಡೆದುಕೊಳ್ತಿದೆ ಎಂದು ರೋಷನ್ ರಾಜ್ ಎಂಬ ನೆಟ್ಟಿಗರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಆದಾಯ ತೆರಿಗೆ ಪಾವತಿದಾರರು ಹಾಗೂ ಮಧ್ಯಮ ವರ್ಗದವರು ಈ ಬಾರಿಯೂ ಬಜೆಟ್‍ನಿಂದ ತಮಗೆ ನಿರಾಸೆಯಾಗಿದೆ ಎಂದೇ ಅಭಿಪ್ರಾಯ ಹೊರಹಾಕಿದ್ದಾರೆ.