ಬೆಂಗಳೂರು,ಜು.20- ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ತೆರಿಗೆಯ ನೋಟಿಸ್ ನೀಡಿರುವ ಸಂಬಂಧ ಪಟ್ಟಂತೆ ರಾಜ್ಯಸರ್ಕಾರ ಯಾವುದೇ ಜವಾಬ್ದಾರಿ ಹೊಂದಿಲ್ಲ . ಕೇಂದ್ರ ಸರ್ಕಾರವೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಎಸ್‌ಟಿ ಕಾಯ್ದೆ ಮಾಡಿರುವುದು ಕೇಂದ್ರ ಸರ್ಕಾರ. ಜಿಎಸ್‌ಟಿ ಕೌನ್ಸಿಲ್ ಕೂಡ ರಾಜ್ಯ ಸರ್ಕಾರದ ಅಧೀನದಲ್ಲಿ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಹೊಣೆಗಾರಿಕೆ ಹೊಂದಿದೆ ಎಂದರು.
ರಾಜ್ಯ ಸರ್ಕಾರದಿಂದ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಲು ಯಾವುದಾದರೂ ಅವಕಾಶಗಳು ಇದ್ದರೆ ಅದರ ಬಗ್ಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರದ ಜೊತೆಗೂ ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.
ಡಿ.ಕೆ.ಶಿವಕುಮಾರ್ ಅಪಮಾನ ಮಾಡಿಲ್ಲ:
ನಿನ್ನೆ ಮೈಸೂರಿನಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಪಮಾನ ಮಾಡಿಲ್ಲ. ಬಿಜೆಪಿ ಈ ವಿಚಾರವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಇರಲಿಲ್ಲ. ಹಾಗಾಗಿ ಅವರ ಹೆಸರನ್ನು ಕರೆಯಲಿಲ್ಲ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ. ಯಾರು ಇರುತ್ತಾರೋ ಅವರ ಹೆಸರನ್ನು ಕರೆಯುವುದು ರೂಢಿ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಇದ್ದ ಡಿ.ಕೆ. ಶಿವಕುಮಾರ್ ನಾನು ಅಲ್ಲಿ ಇರಲೇ ಇಲ್ಲ ಎಂದು ಮುಖ್ಯಮಂತ್ರಿ ಅವರಿಗೆ ಬೆಂಬಲ ಸೂಚಿಸಿದರು. ಮಾತು ಮುಂದುವರೆಸಿದ ಮುಖ್ಯಮಂತ್ರಿ ಅವರು, ಬಿಜೆಪಿ ನಮಿಬ್ಬರ ನಡುವೆ ಒಡಕು ಮೂಡಿಸಿ, ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಅದು ಯಶಸ್ವಿಯಾಗುವುದಿಲ್ಲ. ಬಿಜೆಪಿ ಅವರು ಯಾವಾಗಲೂ ಭ್ರಮೆಯಲ್ಲೇ ಇರುತ್ತಾರೆ ಎಂದರು. ಇದಕ್ಕೆ ಡಿ.ಕೆ. ಶಿವಕುಮಾರ್ ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿದರು.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ