ನವದೆಹಲಿ, ಮೇ 28- ಕೇಂದ್ರದ ಎನ್‌ಡಿಎ ನೇತೃತ್ವದ ಸರ್ಕಾರವು ಮುಂಬರುವ ಸಂಸತ್ ಮಳೆಗಾಲದ ಅಧಿವೇಶನದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲು ಸಿದ್ಧತೆ ನಡೆಸುತ್ತಿದೆ.
ಮಾರ್ಚ್ 14ರ ರಾತ್ರಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಗಣನೀಯ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳ ನಂತರ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಸರ್ಕಾರವು ಸಂಬಂಧಿತ ಸಚಿವಾಲಯದ ಮೂಲಕ ಮಹಾಭಿಯೋಗ ಪ್ರಕ್ರಿಯೆಯನ್ನು ಆರಂಭಿಸುವ ಸಾಧ್ಯತೆ ಇದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಭೇಟಿ ಮಾಡಿರುವ ಬೆಳವಣಿಗೆ ನ್ಯಾಯಮೂರ್ತಿ ವರ್ಮಾ ವಿರುದ್ಧದ ವಿಚಾರಣೆಯ ಸಂಭಾವ್ಯತೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ರಚಿಸಿದ್ದ ಮೂವರು ಸದಸ್ಯರ ಆಂತರಿಕ ತನಿಖಾ ಸಮಿತಿಯು ನ್ಯಾಯಮೂರ್ತಿ ವರ್ಮಾ ಅವರಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ವರದಿಯಾಗಿದೆ.
ಸಮಿತಿಯ ತನಿಖೆಯಲ್ಲಿ ನ್ಯಾಯಾಧೀಶರ ನಿವಾಸದಲ್ಲಿ ಪತ್ತೆಯಾದ ಸುಟ್ಟುಹೋದ ಕರೆನ್ಸಿ ನೋಟುಗಳ ಛಾಯಾಚಿತ್ರಗಳು ಮತ್ತು ವಿಡಿಯೋವನ್ನು ಒಳಗೊಂಡಿವೆ ಎಂದು ಹೇಳಲಾಗುತ್ತದೆ. ಈ ಬೆಳವಣಿಗೆಗಳ ಹೊರತಾಗಿಯೂ, ಇನ್ನೂ ಯಾವುದೇ ಪ್ರಥಮ ಮಾಹಿತಿ ವರದಿ ದಾಖಲಾಗಿಲ್ಲ ಮತ್ತು ನ್ಯಾಯಮೂರ್ತಿ ವರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿಲ್ಲ.
ಇನ್ನು ಉಪ ರಾಷ್ಟ್ರಪತಿ ಜಗದೀಪ್ ಧನ್ಗರ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾನೂನಿನ ನಿಯಮವನ್ನು ಎತ್ತಿಹಿಡಿಯುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ನ್ಯಾಯಾಂಗ ಸ್ವಾತಂತ್ರ್ಯವು ಹೊಣೆಗಾರಿಕೆ ಮತ್ತು ಕಾನೂನುಬದ್ಧ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎಂದು ಅವರು ಹೇಳಿದ್ದಾರೆ. ಅಲ್ಲದೆ ಅಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಮಾರ್ಚ್ 14ರ ರಾತ್ರಿ ಬೆಂಕಿ ಅವಘಡದ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಪತ್ತೆ ಕುರಿತು ಸುಪ್ರೀಂ ಕೋರ್ಟ್ ನೇಮಿಸಿದ ಆಂತರಿಕ ತನಿಖಾ ಸಮಿತಿಯು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖಿನ್ನಾಗೆ ವರದಿಯನ್ನು ನೀಡಿದೆ. ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣವನ್ನು ವರದಿ ದೃಢಪಡಿಸಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಅವರ ನಿರ್ದೇಶನದ ಮೇರೆಗೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ವರದಿಯನ್ನು ಕಳುಹಿಸಲಾಗಿದೆ ಎಂದು ದೃಢಪಡಿಸಿವೆ. ವರದಿಗಳಿಗೆ ಪ್ರತಿಕ್ರಿಯಿಸಲು ನ್ಯಾಯಮೂರ್ತಿ ವರ್ಮಾ ಅವರಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ನ್ಯಾಯಮೂರ್ತಿ ವರ್ಮಾ ಅವರಿಗೆ ಪ್ರತಿಕ್ರಿಯಿಸಲು ನ್ಯಾಯಯುತ ಅವಕಾಶವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಸ್ವಾಭಾವಿಕ ನ್ಯಾಯದ ತತ್ವಗಳಿಗೆ ಅನುಸಾರವಾಗಿ ಇದನ್ನು ಮಾಡಲಾಗಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನು ನೀಡಲಾಗಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಅವರು ರಾಜೀನಾಮೆ ನೀಡಲು ನಿರಾಕರಿಸಿದರೆ, ದೋಷಾರೋಪಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಬಹುದು. ಮಾರ್ಚ್ 14-15 ರಂದು ನಡೆದ ಘಟನೆಯ ವಾಸ್ತವಿಕ ಕಾಲಾನುಕ್ರಮವನ್ನು ಒಳಗೊಂಡಿದೆ. ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ವೇಳೆ ನಗದು ಪತ್ತೆಗೆ ಕಾರಣ ಮತ್ತು ತುರ್ತು ಸೇವೆಗಳ ಪ್ರತಿಕ್ರಿಯೆಯನ್ನು ವಿವರಿಸುತ್ತದೆ. ಘಟನೆಯ ಸಮಯದಲ್ಲಿ ಯಾರೆಲ್ಲಾ ಇದ್ದರು ಎಂಬುದನ್ನು ವರದಿಯು ಹೇಳುತ್ತದೆ.
ಬೆಂಕಿ ಅವಘಡ ಸಂಭವಿಸಿದಾಗ ಸ್ಥಳಕ್ಕೆ ತಲುಪಿದ ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರು ಮತ್ತು ದೆಹಲಿ ಹೈಕೋರ್ಟ್ ರಿಜಿಸ್ಟ್ರಾರ್ ಸೇರಿದಂತೆ ನ್ಯಾಯಮೂರ್ತಿ ವರ್ಮಾ, ಅವರ ಸಿಬ್ಬಂದಿ, ಅಗ್ನಿಶಾಮಕ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ಸಮಿತಿ ದಾಖಲಿಸಿಕೊಂಡಿತ್ತು.