ಬೆಂಗಳೂರು,ಏ.27– ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾದ ನಂತರ ಪ್ರಸಕ್ತ ಸಾಲಿನ ಪಿಜಿ ಸಿಇಟಿ ಫಲಿತಾಂಶವು ಪ್ರಕಟವಾಗಲಿದೆ.ದ್ವಿತೀಯ ಪಿಯುಸಿ-1 ಮತ್ತು 2ರ ಪರೀಕ್ಷೆಯ ಫಲಿತಾಂಶದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಫಲಿತಾಂಶ ಪ್ರಕಟಿಸಿ ರ್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೇ 20 ರ ವೇಳೆಗೆ ಸಿಇಟಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮೇ 8 ಕ್ಕೆ ಮುಕ್ತಾಯವಾಗಲಿದೆ. ಕಡಿಮೆ ವಿದ್ಯಾರ್ಥಿಗಳಿರುವ ಕಾರಣ ಸುಮಾರು ಎಂಟು-ಹತ್ತು ದಿನದಲ್ಲಿ ಮೌಲ್ಯಮಾಪನ ಕಾರ್ಯ ಮುಗಿಯಲಿದ್ದು, ಫಲಿತಾಂಶವನ್ನು ತಕ್ಷಣವೇ ಪ್ರಕಟಿಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸುವ ಸಾಧ್ಯತೆಗಳಿವೆ.
ಏ.16 ಮತ್ತು 17 ರಂದು 2025ರ ಸಿಇಟಿ ಪರೀಕ್ಷೆ ನಡೆದಿದೆ. ಏ.15 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿಯ ಸಿಇಟಿ ಪರೀಕ್ಷೆಯ ಓಎಂಆರ್ ಸೀಟುಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸಿಇಟಿ ಪರೀಕ್ಷೆಗೆ 3.30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, ಶೇ.92ಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.