ಬೆಂಗಳೂರು,ಸೆ.15- ನಗರದಲ್ಲಿ ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಸುತ್ತಾಡುತ್ತಾ ಇಬ್ಬರು ಮಹಿಳೆಯರಿಗೆ ಲಾಂಗ್‌ನಿಂದ ಬೆದರಿಸಿ ಎರಡು ಸರಗಳನ್ನು ಕಿತ್ತುಕೊಂಡಿದ್ದು, ಆ ವೇಳೆ ಪ್ರತಿರೋಧವೊಡ್ಡಿದ ಮಹಿಳೆಯ ಕೈ ಬೆರಳು ತುಂಡರಿಸಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈಶ್ವರಿ ನಗರದಲ್ಲಿ ಪ್ರತಿಷ್ಠಾಪಿ ಸಿದ್ದ ಗಣೇಶಮೂರ್ತಿ ಸ್ಥಳದಲ್ಲಿ ಮೊನ್ನೆ ರಾತ್ರಿ ಆರ್ಕೆಸ್ಟ್ರಾ ಆಯೋಜಿ ಸಲಾಗಿತ್ತು. ಹಾಗಾಗಿ ಕಾರ್ಯಕ್ರಮ ವೀಕ್ಷಿಸಲು ಸ್ಥಳೀಯ ನಿವಾಸಿಗಳಾದ ಉಷಾ ಮತ್ತು ವರಲಕ್ಷ್ಮೀ ಹೋಗಿದ್ದಾರೆ. ಕಾರ್ಯಕ್ರಮ ವೀಕ್ಷಿಸಿ ಅಂದು ರಾತ್ರಿ ಇವರಿಬ್ಬರು ಮನೆಗೆ ವಾಪಸ್ ನಡೆದುಕೊಂಡು ಹೋಗುತ್ತಿದ್ದರು.
ಆ ವೇಳೆ ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಒಬ್ಬರ ಕುತ್ತಿಗೆಗೆ ಲಾಂಗ್ ಇಟ್ಟು ಸರ ಬಿಚ್ಚಿಕೊಡುವಂತೆ ಬೆದರಿಸಿದ್ದಾರೆ. ಇದರಿಂದ ಗಾಬರಿಗೊಂಡ ಒಬ್ಬರು ಭಯದಲ್ಲಿ ಚಿನ್ನದ ಸರ ತೆಗೆದುಕೊಟ್ಟಿದ್ದಾರೆ.
ಇವರ ಜೊತೆಯಲ್ಲಿದ್ದ ಮತ್ತೊಬ್ಬರು ಪ್ರತಿರೋಧ ಒಡ್ಡಿದಾಗ ಲಾಂಗ್‌ನಿಂದ ಆಕೆಯ ಬೆರಳು ತುಂಡಾಗಿದೆ. ಆದರೂ ಸಹ ಬಿಡದೆ ದರೋಡೆಕೋರರು ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರ ಕೃತ್ಯಕ್ಕೆ ಮಹಿಳೆಯರು ಆತಂಕಗೊಂಡಿದ್ದಾರೆ. ಉಷಾ ಅವರ 10 ಗ್ರಾಂ ಸರ ಹಾಗೂ ವರಲಕ್ಷಿ ಅವರ 45 ಗ್ರಾಂ ಸರವನ್ನು ದರೋಡೆಕೋರರು ಸುಲಿಗೆ ಮಾಡಿದ್ದು, ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದಲ್ಲದೇ ಈ ಇಬ್ಬರು ದರೋಡೆಕೋರರು ಗಿರಿನಗರ, ಇಂದಿರಾ ನಗರ, ಕೊತ್ತನೂರು, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಲಾಂಗ್‌ನಿಂದ ಬೆದರಿಸಿ ಮೊಬೈಲ್, ಚಿನ್ನದ ಸರಗಳನ್ನು ಎಗರಿಸಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದರೋಡೆಕೋರರ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿದ್ದು, ಈ ತಂಡಗಳು ಈಗಾಗಲೇ ದರೋಡೆಕೋರರಿಗಾಗಿ ಕಾರ್ಯಾಚರಣೆ ಕೈಗೊಂಡಿವೆ.