Tuesday, September 17, 2024
Homeರಾಜ್ಯಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕಳಪೆ ಮೊಟ್ಟೆ ತಿಂದು ನೋಡಿ ಎಂದ ಸಭಾಪತಿ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕಳಪೆ ಮೊಟ್ಟೆ ತಿಂದು ನೋಡಿ ಎಂದ ಸಭಾಪತಿ

ಬೆಂಗಳೂರು,ಜು.19- ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೂರೈಕೆಯಾಗುತ್ತಿರುವ ಕಳಪೆ ಆಹಾರದ ಕುರಿತು ಒಂದು ಬಾರಿ ಸಚಿವರು ಮೊಟ್ಟೆ ತಿಂದು ನೋಡಿದರೆ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಸಭಾಪತಿ ಹೊರಟ್ಟಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸೂಚಿಸಿದ ಪ್ರಸಂಗ ವಿಧಾನಪರಿಷತ್‌ನಲ್ಲಿ ನಡೆಯಿತು.

ಪ್ರಶ್ನೋತ್ತರ ಸಂದರ್ಭದಲ್ಲಿ ಸದಸ್ಯೆ ಹೇಮಲತಾ ನಾಯಕ್‌ ಅವರು ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿ ರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಗಮನ ಸೆಳೆದರು.

ಮಕ್ಕಳಿಗೆ ನಮ ಸರ್ಕಾರ ಪೌಷ್ಟಿಕಾಂಶವುಳ್ಳ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಂಬಂಧ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ಸಭೆ ನಡೆಸಿದ್ದರೆಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಹೇಮಲತಾ ನಾಯಕ್‌ ಅನೇಕ ಅಂಗನವಾಡಿಗಳಲ್ಲಿ ಕಳಪೆ ಗುಣಮಟ್ಟದ ಆಹಾರಗಳನ್ನು ಪೂರೈಕೆ ಮಾಡಲಾಗುತ್ತಿದೆ. ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಸೇರಿದಂತೆ ಎಲ್ಲವೂ ಕಳಪೆಯಾಗಿವೆ. ತಿನ್ನಲು ಯೋಗ್ಯವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಆಗ ಹೆಬ್ಬಾಳ್ಕರ್‌ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಮಧ್ಯಪ್ರವೇಶಿಸಿದ ಬಸವರಾಜ ಹೊರಟ್ಟಿ, ನೀವು ಮೊಟ್ಟೆಯನ್ನು ತಿನ್ನುತ್ತೀರಾ? ಒಂದು ಬಾರಿ ತಿಂದರೆ ನಿಮಗೆ ಗೊತ್ತಾಗುತ್ತದೆ ಎಂದು ಅಂಗನವಾಡಿಗಳ ವಸ್ತುಸ್ಥಿತಿಯನ್ನು ವಿವರಿಸುವ ಪ್ರಯತ್ನ ಮಾಡಿದರು.

ಆಗ ಸಚಿವರು ನಾನು ಮೊಟ್ಟೆಯನ್ನು ಇದುವರೆಗೂ ತಿಂದಿಲ್ಲ. ಅದನ್ನು ಕೈಯಲ್ಲೂ ಮುಟ್ಟುವುದಿಲ್ಲ. ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.ಈ ವೇಳೆ ಹೊರಟ್ಟಿ ಅವರು, ಸದಸ್ಯರ ಜೊತೆಗೂಡಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಿ, ಎಲ್ಲಿ ಸಮಸ್ಯೆಗಳಿವೆಯೋ ಅಂತಹ ಕಡೆ ಆದ್ಯತೆ ಮೇರೆಗೆ ಗಮನಹರಿಸಿ ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಹೇಮಲತಾ ನಾಯಕ್ ಅವರು ಸದನಕ್ಕೆ ಕಳಪೆ ಗುಣಮಟ್ಟದಿಂದ ಕೂಡಿರುವ ಮೊಟ್ಟೆಗಳನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಸದನದಲ್ಲಿ ಪ್ರದರ್ಶಿಸಲು ಬಂದಿದ್ದರು. ಆದರೆ ಸಭಾಪತಿಗಳು ಅದಕ್ಕೆ ಅವಕಾಶ ಕೊಡಲಿಲ್ಲ.

ಇದಕ್ಕೆ ಮುನ್ನ ಮಾತನಾಡಿದ ಸಚಿವೆ ಹೆಬ್ಬಾಳ್ಕರ್‌, ಇದು ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿ 49 ವರ್ಷಗಳಾಗಿವೆ. ದೇವರ ದಯೆಯಿಂದ ಎಲ್ಲಿಯೂ ಕೂಡ ಕಹಿಯಾದ ಘಟನೆ ನಡೆದಿಲ್ಲ. ಒಂದು ವೇಳೆ ಎಲ್ಲಾದರೂ ಸಮಸ್ಯೆಗಳಿದ್ದರೆ ಸರಿಪಡಿಸುತ್ತೇವೆ ಎಂದು ಭರವಸೆ ಕೊಟ್ಟರು.

RELATED ARTICLES

Latest News