ಬೆಂಗಳೂರು,ಜು.18- ಸದನ ನಡೆಯುವ ವೇಳೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ನಾನು ಪದೇಪದೇ ಹೇಳುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಡಳಿತ ಪಕ್ಷದಲ್ಲಿ ಎಚ್ಚರಿಕೆ ಕೊಟ್ಟ ಘಟನೆ ನಡೆಯಿತು.
ಸದನ ಆರಂಭವಾದಾಗ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರು ಹಾಗೂ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿತ್ತು. ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಪ್ರಶ್ನೆ ಕೇಳಿದ್ದರು.
ಈ ವೇಳೆ ಸದನದಲ್ಲಿ ಸಚಿವರ ಹಾಜರಾತಿ ಇಲ್ಲದಿದ್ದರಿಂದ ಅಸಮಾಧಾನಗೊಂಡ ಪ್ರತಾಪ್ ಸಿಂಹ ನಾಯಕ್, ನಾವು ಯಾರಿಗೆ ಪ್ರಶ್ನೆ ಕೇಳಬೇಕು, ಸಂಬಂಧಪಟ್ಟ ಇಲಾಖಾ ಸಚಿವರೂ ಇಲ್ಲ, ಮಾಹಿತಿ ಕೊಡಲು ಅಧಿಕಾರಿಗಳೂ ಇಲ್ಲ ಎಂದು ಬೇಸರ ಹೊರಹಾಕಿದರು.
ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ಬೋಜೇಗೌಡ, ಸದನ ನಡೆಯುವಾಗ ಸಚಿವರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ಹಿಂದೆಯೂ ನೀವು ಇದರ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿದ್ದೀರಿ. ನಿಮ ಮಾತಿಗೆ ಬೆಲೆ ಇಲ್ಲ ಎಂದರೆ ಹೇಗೆ ಪ್ರಶ್ನಿಸಿದರು.
ಆಗ ಹೊರಟ್ಟಿಯವರು ಇಂದು ಸದನದಲ್ಲಿ ಎಚ್.ಕೆ.ಪಾಟೀಲ್, ಡಾ.ಎಂ.ಸಿ. ಸುಧಾಕರ್, ಶರಣಬಸಪ್ಪ ದರ್ಶನಾಪೂರ್, ಜಮೀರ್ ಅಹಮದ್ ಸೇರಿದಂತೆ ಮತ್ತಿತರರು ಸದನದಲ್ಲಿ ಹಾಜರಿರಬೇಕಿತ್ತು. ಜೊತೆಗೆ ಇಂತಹ ಇಲಾಖಾಧಿಕಾರಿಗಳು ಇರಬೇಕಿತ್ತು ಎಂದು ಹೆಸರುಗಳನ್ನು ಓದಿದರು.
ನೀವು ಎಚ್ಚರಿಕೆ ಕೊಟ್ಟ ಮೇಲೆ ಸದನಕ್ಕೆ ಬಾರದಿದ್ದರೆ ಹೇಗೆ? ನಿಮ ಮಾತಿಗೆ ಬೆಲೆ ಇಲ್ಲವೇ ಎಂದು ಬೋಜೇಗೌಡ ಪ್ರಶ್ನಿಸಿದಾಗ ಈಗ ನಾನು ಏನು ಮಾಡಬೇಕು. ಸರ್ಕಾರಕ್ಕೆ ಎಷ್ಟು ಸಾರಿ ಹೇಳುವುದು ಎಂದು ಹೊರಟ್ಟಿ ಬೇಸರದಿಂದಲೇ ಪ್ರಶ್ನಿಸಿದರು.
ಆಗ ಸಭಾನಾಯಕ ಬೋಸ್‌ರಾಜ್ ಅವರಿಗೆ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ. ಪದೇಪದೇ ನಾನು ಹೇಳಿದರೆ ಸರಿಯಲ್ಲ ಎಂದು ಬೇಸರದಿಂದಲೇ ಸರ್ಕಾರಕ್ಕೆ ಸಲಹೆ ನೀಡಿದರು.